Saturday, July 27, 2013

ತುಂಬಿದ ಕೊಡ

ಯಾವುದೇ ಒಂದು ನಗರವನ್ನು ಅದರ ಕೋಟೆ, ಕಟ್ಟಡ, ಸ್ಮಾರಕಗಳಿಂದ ಅಳೆಯದೆ, ಅಲ್ಲಿನ ಜನ, ನಾಡು-ನುಡಿ, ಅಲ್ಲಿನ ಸಂಸ್ಕೃತಿಗಳಿಂದ ಅಳೆಯಬೇಕೆಂದು ಹಿಂದಿನಿಂದ ನಾವು ಕೇಳ್ಪಟ್ಟಿದ್ದೇವೆ. ನಮ್ಮ ನಾಡಿನ ವಿಷಯದಲ್ಲೂ ಈ ವಿಷಯ ಅಕ್ಷರಶಃ ಸತ್ಯ. ನಮ್ಮ ನಾಡು, ಸರ್ ಎಂ ವಿಶ್ವೇಶ್ವರಯ್ಯನವರ ಭವ್ಯ ಸಂಸ್ಕಾರದ, ಅಗಾಧ ಅನುಭವದ, ಸೃಜನಶೀಲ ಮನಸ್ಸಿನ ಕನ್ನಡಿ. ಇವರ ಅನೇಕ ಸ್ನೇಹಿತರಲ್ಲಿ, ಪ್ರಖ್ಯಾತ ಲೇಖಕ ಡಿ. ವಿ. ಗುಂಡಪ್ಪ (ಮಂಕುತಿಮ್ಮನ ಕಗ್ಗ ಕರ್ತೃ) ನವರು ಒಬ್ಬರು. ಇಬ್ಬರು ಆಗಾಗ ವಡೆ, ಫಿಲ್ಟರ್ ಕಾಫಿ ಹೀರುತ್ತಾ ಸಂಜೆ ತಮ್ಮ ತಮ್ಮ ಕ್ಷೇತ್ರಗಳ ವಿಷಯವಾಗಿ ಬಹಳ ಚರ್ಚಿಸುತಿದ್ದರು. ಅವರ ಚರ್ಚೆಗಳು ಅನೇಕ ಬಾರಿ ಮೈಸೂರು ರಾಜ್ಯದ (೧೯೨೧ನೆ ಇಸವಿ) ಅಭಿವೃದ್ಧಿಗೆ ಸಂಬಂಧ ಪಟ್ಟಿರುತ್ತಿದ್ದು, ವಿಶ್ವೇಶ್ವರಯ್ಯನವರಿಗೆ ಗುಂಡಪ್ಪನವರ ಸಲಹೆಗಳಿಂದ ಅನೇಕ ಬಾರಿ ಉಪಯೋಗವಾಗುತ್ತಿತ್ತು.

ಡಿ. ವಿ. ಗುಂಡಪ್ಪನವರದ್ದು ಎಲ್ಲ ಕ್ಷೇತ್ರಗಳಲ್ಲೂ ಅಸಾಧಾರಣ ಪ್ರತಿಭೆ. ವಿಶ್ವೇಶ್ವರಯ್ಯನವರು ತಮ್ಮ ಕೆಲಸದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದರ ಪರಿಹಾರವನ್ನು ಗುಂಡಪ್ಪನವರ ಸಲಹೆ ಸೂಚನೆಗಳಲ್ಲಿ ಕಂಡುಕೊಳ್ಳುತ್ತಿದ್ದರು. ಅನೇಕ ಬಾರಿ ಇಂಥಹ ಸಹಾಯ ಪಡೆದ ವಿಶ್ವೇಶ್ವರಯ್ಯನವರು, ಕಡು ಬಡತನದಲ್ಲಿ ಬೇಯುತ್ತಿದ್ದ ಗುಂಡಪ್ಪನವರಿಗೆ ಸಹಾಯ ಮಾಡಬೇಕೆಂದು ಬಹಳಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ.



ಹೀಗೆ ಇವರ ಸ್ನೇಹ ಗಟ್ಟಿಗೊಳ್ಳುತ್ತಿರಬೇಕಾದರೆ, ಒಂದು ದಿನ ವಿಶ್ವೇಶ್ವರಯ್ಯನವರು ಸೌತ್ ಇಂಡಿಯಾ ಪೀಪಲ್ಸ್ ಕಾನ್ಫರೆನ್ಸ್ (೧೯೨೯) ಗೆ ಅಧ್ಯಕ್ಷರಾಗಿ ನೇಮಕಗೊಂಡಾಗ, ಗುಂಡಪ್ಪನವರೇ ತಮ್ಮ ಪ್ರಮುಖ ಕಾರ್ಯದರ್ಶಿ ಆಗಬೇಕೆಂದು ಹಠ ಹಿಡಿದರು. ಹಾಗೆ ಮೈಸೂರು ರಾಜ್ಯಕ್ಕೆ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕೆಂದು ಕೋರಿಕೊಂಡಿದ್ದರು. ವಿಶ್ವೇಶ್ವರಯ್ಯನವರ ಇಂಗಿತ ಅರಿತ ಗುಂಡಪ್ಪನವರ ಸ್ವಾಭಿಮಾನ ಇದಕ್ಕೆ ಒಪ್ಪಲಿಲ್ಲ. "ನನ್ನ ವೃತ್ತಿಧರ್ಮ ಬರವಣಿಗೆ ಹಾಗು ಪತ್ರಿಕೋದ್ಯಮ. ಸ್ನೇಹಿತನ ಜೊತೆ ನಡೆಸಿದ ಮಾತುಕಥೆಗಳಿಗೆ ಹಣ ತೆಗೆದುಕೊಳ್ಳಲಾರೆ" ಎಂದು ನಯವಾಗಿ ತಿರಸ್ಕರಿಸಿದರು. ಇದರಿಂದ ನಿರಾಶರಾದ ವಿಶ್ವೇಶ್ವರಯ್ಯ, ಬೇರೆ ದಾರಿ ಕಾಣದೆ ಗುಂಡಪ್ಪನವರಿಗೆ "ನೀವು ಒಪ್ಪದೇ ಹೋದರೆ ನಾನು ಮತ್ತೆಂದಿಗೂ ನಿಮ್ಮೊಡನೆ ರಾಜ್ಯಕ್ಕೆ ಸಂಬಂಧ ಪಟ್ಟ ವಿಚಾರಗಳನ್ನು ಎತ್ತುವುದಿಲ್ಲ ಮತ್ತು ಸಲಹೆ ಸೂಚನೆಗಳನ್ನು ಪಡೆಯುವುದಿಲ್ಲ" ವೆಂದು ತಾಕೀತು ಮಾಡಿದರು.

ರಾಜಕೀಯವೆಂದರೆ ಅಪಾರ ಆಸಕ್ತಿ ಹೊಂದಿದ್ದ ಗುಂಡಪ್ಪನವರು ತಮ್ಮ ಸ್ನೇಹಿತನ ಮಾತಿಗೆ ಅವಾಕ್ಕಾದರು. ವಿಶ್ವೇಶ್ವರಯ್ಯನವರಂತು ಮಾತಿಗೆ ಸಿಕ್ಕಾಗಲೆಲ್ಲಾ, ಬರಿ ವಯಕ್ತಿಕ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದರೆ ವಿನಃ ಬೇರೆ ಮಾತೆ ಆಡುತ್ತಿರಲಿಲ್ಲ. ಗುಂಡಪ್ಪನವರು ರಾಜ್ಯಕ್ಕೆ ಸಂಬಂಧಿಸಿದ ವಿಷಯ ಎತ್ತಿದರೂ, ವಿಶ್ವೇಶ್ವರಯ್ಯನವರು ದಿವ್ಯ ಮೌನ ತಾಳುತ್ತಿದ್ದರು. ಒಂದೆರಡು ದಿನಗಳಲ್ಲೇ ವಿಶ್ವೇಶ್ವರಯ್ಯನವರ ಈ ನಡವಳಿಕೆಯಿಂದ ಗುಂಡಪ್ಪನವರು ಚಡಪಡಿಸಲಾರಂಭಿಸಿದರು. ಕೊನೆಗೆ ಬೇರೆ ದಾರಿ ಕಾಣದೆ ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿಕೊಂಡರು.

ವಿಶ್ವೇಶ್ವರಯ್ಯನವರು ಕೊನೆಗೂ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಅವಕಾಶ ಸಿಕ್ಕಿತೆಂದು ಬಹಳ ಸಂತೋಷಪಟ್ಟರು. ತಮ್ಮ ಸ್ನೇಹಿತನೂ ಸರ್ಕಾರದಿಂದ ದೊರೆಯುತ್ತಿದ್ದ ಗೌರವ-ಮನ್ನಣೆ-ಆದರಗಳಿಗೆ ಪಾತ್ರನಾಗಿ ಬಡತನದಿಂದ ಹೊರಬರುವನೆಂದು ಖುಷಿಪಟ್ಟರು. ಹೀಗೆ ಅನೇಕ ವರ್ಷಗಳವರೆಗೂ ಇವರ ಸ್ನೇಹ ಭಾಂಧವ್ಯ ಮುಂದುವರೆಯಿತು. ಅನೇಕ ಅತ್ಯಮೂಲ್ಯ ಸಲಹೆ, ಅನುಭವ, ವಿಚಾರಗಳ ಮೂಲಕ ಮೈಸೂರು ರಾಜ್ಯದ, ಬೆಂಗಳೂರಿನ ಉನ್ನತಿಗೆ ಕಾರಣಕರ್ತರಾದರು. ಗೋಪಾಲ ಕೃಷ್ಣ ಗೋಖಲೆಯವರ ಅಭಿಮಾನಿಗಳಾಗಿದ್ದ ಗುಂಡಪ್ಪನವರು ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ನಿರ್ಮಿಸಿ ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದರು.
   
೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ್ದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೫ರ ಅಕ್ಟೋಬರ್ ೭ರಂದು (ಮೇಲೆ ಹೇಳಿದ ಘಟನೆ ನಡೆದ ೫೦ ವರ್ಷಗಳ ನಂತರ) ಡಿ ವಿ ಜಿ ನಿಧನರಾದರು. ಅವರಿಗೆ ಸಂಬಂಧಪಟ್ಟ ವಸ್ತುಗಳ ವಿಲೇವಾರಿ ನಡೆಯಬೇಕಾದರೆ ಒಂದು ಕಬ್ಬಿಣದ ಪಟ್ಟಿಗೆ ಸಿಕ್ಕಿತು. ಅದನ್ನು ತೆರೆದು ನೋಡಿದಾಗ, ಗುಂಡಪ್ಪನವರಿಗೆ, ಅವರು ನೀಡಿದ ಸೇವೆಗೆ, ಮೈಸೂರು ರಾಜ್ಯದ ಖಜಾಂಚಿಯವರ ಸಹಿ ಇದ್ದ, ಎಂದೆಂದೂ ಉಪಯೋಗಿಸಿರದ ೯೦೦, ೧೨೦೦, ೧೫೦೦ ರೂಪಾಯಿ ಮೊತ್ತದ ಹಲವಾರು ಚೆಕ್ಕುಗಳು ಸಿಕ್ಕವು. ಆಗಿನ ಕಾಲದಲ್ಲಿ ಅವುಗಳ ಬೆಲೆ ಲಕ್ಷಕ್ಕೂ ಹೆಚ್ಚು. ಎಂಥಹುದೇ ಕಷ್ಟ ಬಂದಾಗಲೂ ಒಂದೇ ಒಂದು ಚೆಕ್ಕನ್ನು ಉಪಯೋಗಿಸದೆ ತಮ್ಮ ಸ್ವಾಭಿಮಾನ ಮೆರೆದಿದ್ದರು.

ಸ್ನೇಹಿತನ ಮನಸ್ಸಿಗೆ ನೋವಾಗಬಾರದೆಂದು ಹಾಗು ತನ್ನ ಮನಸ್ಸಿಗೂ ಇರುಸುಮುರುಸಾಗಬಾರದೆಂದು ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿಕೊಂಡಿದ್ದ ಗುಂಡಪ್ಪನವರು ಅದರಿಂದ ಬಂದಿದ್ದ ಸಂಪತ್ತನ್ನು ಉಪಯೋಗಿಸದೆ, ಸ್ನೇಹವೇ ಸಂಪತ್ತು ಎಂದು ನಿರೂಪಿಸಿದ್ದರು. ಬಹಳಷ್ಟು ದೊಡ್ಡ ಮನುಷ್ಯರ ಕೆಲವೊಂದು ಉನ್ನತ ಗುಣಗಳನ್ನು ಅವರು ಮಾಡಿರುವ ಕೆಲಸಗಳಿಂದ ಅಳೆಯದೆ, ಅವರು ಮಾಡಿರದ ಕೆಲಸಗಳಿಂದ ಅಳೆಯಬಹುದಲ್ಲವೇ??