Saturday, July 27, 2013

ತುಂಬಿದ ಕೊಡ

ಯಾವುದೇ ಒಂದು ನಗರವನ್ನು ಅದರ ಕೋಟೆ, ಕಟ್ಟಡ, ಸ್ಮಾರಕಗಳಿಂದ ಅಳೆಯದೆ, ಅಲ್ಲಿನ ಜನ, ನಾಡು-ನುಡಿ, ಅಲ್ಲಿನ ಸಂಸ್ಕೃತಿಗಳಿಂದ ಅಳೆಯಬೇಕೆಂದು ಹಿಂದಿನಿಂದ ನಾವು ಕೇಳ್ಪಟ್ಟಿದ್ದೇವೆ. ನಮ್ಮ ನಾಡಿನ ವಿಷಯದಲ್ಲೂ ಈ ವಿಷಯ ಅಕ್ಷರಶಃ ಸತ್ಯ. ನಮ್ಮ ನಾಡು, ಸರ್ ಎಂ ವಿಶ್ವೇಶ್ವರಯ್ಯನವರ ಭವ್ಯ ಸಂಸ್ಕಾರದ, ಅಗಾಧ ಅನುಭವದ, ಸೃಜನಶೀಲ ಮನಸ್ಸಿನ ಕನ್ನಡಿ. ಇವರ ಅನೇಕ ಸ್ನೇಹಿತರಲ್ಲಿ, ಪ್ರಖ್ಯಾತ ಲೇಖಕ ಡಿ. ವಿ. ಗುಂಡಪ್ಪ (ಮಂಕುತಿಮ್ಮನ ಕಗ್ಗ ಕರ್ತೃ) ನವರು ಒಬ್ಬರು. ಇಬ್ಬರು ಆಗಾಗ ವಡೆ, ಫಿಲ್ಟರ್ ಕಾಫಿ ಹೀರುತ್ತಾ ಸಂಜೆ ತಮ್ಮ ತಮ್ಮ ಕ್ಷೇತ್ರಗಳ ವಿಷಯವಾಗಿ ಬಹಳ ಚರ್ಚಿಸುತಿದ್ದರು. ಅವರ ಚರ್ಚೆಗಳು ಅನೇಕ ಬಾರಿ ಮೈಸೂರು ರಾಜ್ಯದ (೧೯೨೧ನೆ ಇಸವಿ) ಅಭಿವೃದ್ಧಿಗೆ ಸಂಬಂಧ ಪಟ್ಟಿರುತ್ತಿದ್ದು, ವಿಶ್ವೇಶ್ವರಯ್ಯನವರಿಗೆ ಗುಂಡಪ್ಪನವರ ಸಲಹೆಗಳಿಂದ ಅನೇಕ ಬಾರಿ ಉಪಯೋಗವಾಗುತ್ತಿತ್ತು.

ಡಿ. ವಿ. ಗುಂಡಪ್ಪನವರದ್ದು ಎಲ್ಲ ಕ್ಷೇತ್ರಗಳಲ್ಲೂ ಅಸಾಧಾರಣ ಪ್ರತಿಭೆ. ವಿಶ್ವೇಶ್ವರಯ್ಯನವರು ತಮ್ಮ ಕೆಲಸದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದರ ಪರಿಹಾರವನ್ನು ಗುಂಡಪ್ಪನವರ ಸಲಹೆ ಸೂಚನೆಗಳಲ್ಲಿ ಕಂಡುಕೊಳ್ಳುತ್ತಿದ್ದರು. ಅನೇಕ ಬಾರಿ ಇಂಥಹ ಸಹಾಯ ಪಡೆದ ವಿಶ್ವೇಶ್ವರಯ್ಯನವರು, ಕಡು ಬಡತನದಲ್ಲಿ ಬೇಯುತ್ತಿದ್ದ ಗುಂಡಪ್ಪನವರಿಗೆ ಸಹಾಯ ಮಾಡಬೇಕೆಂದು ಬಹಳಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ.ಹೀಗೆ ಇವರ ಸ್ನೇಹ ಗಟ್ಟಿಗೊಳ್ಳುತ್ತಿರಬೇಕಾದರೆ, ಒಂದು ದಿನ ವಿಶ್ವೇಶ್ವರಯ್ಯನವರು ಸೌತ್ ಇಂಡಿಯಾ ಪೀಪಲ್ಸ್ ಕಾನ್ಫರೆನ್ಸ್ (೧೯೨೯) ಗೆ ಅಧ್ಯಕ್ಷರಾಗಿ ನೇಮಕಗೊಂಡಾಗ, ಗುಂಡಪ್ಪನವರೇ ತಮ್ಮ ಪ್ರಮುಖ ಕಾರ್ಯದರ್ಶಿ ಆಗಬೇಕೆಂದು ಹಠ ಹಿಡಿದರು. ಹಾಗೆ ಮೈಸೂರು ರಾಜ್ಯಕ್ಕೆ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕೆಂದು ಕೋರಿಕೊಂಡಿದ್ದರು. ವಿಶ್ವೇಶ್ವರಯ್ಯನವರ ಇಂಗಿತ ಅರಿತ ಗುಂಡಪ್ಪನವರ ಸ್ವಾಭಿಮಾನ ಇದಕ್ಕೆ ಒಪ್ಪಲಿಲ್ಲ. "ನನ್ನ ವೃತ್ತಿಧರ್ಮ ಬರವಣಿಗೆ ಹಾಗು ಪತ್ರಿಕೋದ್ಯಮ. ಸ್ನೇಹಿತನ ಜೊತೆ ನಡೆಸಿದ ಮಾತುಕಥೆಗಳಿಗೆ ಹಣ ತೆಗೆದುಕೊಳ್ಳಲಾರೆ" ಎಂದು ನಯವಾಗಿ ತಿರಸ್ಕರಿಸಿದರು. ಇದರಿಂದ ನಿರಾಶರಾದ ವಿಶ್ವೇಶ್ವರಯ್ಯ, ಬೇರೆ ದಾರಿ ಕಾಣದೆ ಗುಂಡಪ್ಪನವರಿಗೆ "ನೀವು ಒಪ್ಪದೇ ಹೋದರೆ ನಾನು ಮತ್ತೆಂದಿಗೂ ನಿಮ್ಮೊಡನೆ ರಾಜ್ಯಕ್ಕೆ ಸಂಬಂಧ ಪಟ್ಟ ವಿಚಾರಗಳನ್ನು ಎತ್ತುವುದಿಲ್ಲ ಮತ್ತು ಸಲಹೆ ಸೂಚನೆಗಳನ್ನು ಪಡೆಯುವುದಿಲ್ಲ" ವೆಂದು ತಾಕೀತು ಮಾಡಿದರು.

ರಾಜಕೀಯವೆಂದರೆ ಅಪಾರ ಆಸಕ್ತಿ ಹೊಂದಿದ್ದ ಗುಂಡಪ್ಪನವರು ತಮ್ಮ ಸ್ನೇಹಿತನ ಮಾತಿಗೆ ಅವಾಕ್ಕಾದರು. ವಿಶ್ವೇಶ್ವರಯ್ಯನವರಂತು ಮಾತಿಗೆ ಸಿಕ್ಕಾಗಲೆಲ್ಲಾ, ಬರಿ ವಯಕ್ತಿಕ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದರೆ ವಿನಃ ಬೇರೆ ಮಾತೆ ಆಡುತ್ತಿರಲಿಲ್ಲ. ಗುಂಡಪ್ಪನವರು ರಾಜ್ಯಕ್ಕೆ ಸಂಬಂಧಿಸಿದ ವಿಷಯ ಎತ್ತಿದರೂ, ವಿಶ್ವೇಶ್ವರಯ್ಯನವರು ದಿವ್ಯ ಮೌನ ತಾಳುತ್ತಿದ್ದರು. ಒಂದೆರಡು ದಿನಗಳಲ್ಲೇ ವಿಶ್ವೇಶ್ವರಯ್ಯನವರ ಈ ನಡವಳಿಕೆಯಿಂದ ಗುಂಡಪ್ಪನವರು ಚಡಪಡಿಸಲಾರಂಭಿಸಿದರು. ಕೊನೆಗೆ ಬೇರೆ ದಾರಿ ಕಾಣದೆ ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿಕೊಂಡರು.

ವಿಶ್ವೇಶ್ವರಯ್ಯನವರು ಕೊನೆಗೂ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಅವಕಾಶ ಸಿಕ್ಕಿತೆಂದು ಬಹಳ ಸಂತೋಷಪಟ್ಟರು. ತಮ್ಮ ಸ್ನೇಹಿತನೂ ಸರ್ಕಾರದಿಂದ ದೊರೆಯುತ್ತಿದ್ದ ಗೌರವ-ಮನ್ನಣೆ-ಆದರಗಳಿಗೆ ಪಾತ್ರನಾಗಿ ಬಡತನದಿಂದ ಹೊರಬರುವನೆಂದು ಖುಷಿಪಟ್ಟರು. ಹೀಗೆ ಅನೇಕ ವರ್ಷಗಳವರೆಗೂ ಇವರ ಸ್ನೇಹ ಭಾಂಧವ್ಯ ಮುಂದುವರೆಯಿತು. ಅನೇಕ ಅತ್ಯಮೂಲ್ಯ ಸಲಹೆ, ಅನುಭವ, ವಿಚಾರಗಳ ಮೂಲಕ ಮೈಸೂರು ರಾಜ್ಯದ, ಬೆಂಗಳೂರಿನ ಉನ್ನತಿಗೆ ಕಾರಣಕರ್ತರಾದರು. ಗೋಪಾಲ ಕೃಷ್ಣ ಗೋಖಲೆಯವರ ಅಭಿಮಾನಿಗಳಾಗಿದ್ದ ಗುಂಡಪ್ಪನವರು ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ನಿರ್ಮಿಸಿ ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದರು.
   
೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ್ದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೫ರ ಅಕ್ಟೋಬರ್ ೭ರಂದು (ಮೇಲೆ ಹೇಳಿದ ಘಟನೆ ನಡೆದ ೫೦ ವರ್ಷಗಳ ನಂತರ) ಡಿ ವಿ ಜಿ ನಿಧನರಾದರು. ಅವರಿಗೆ ಸಂಬಂಧಪಟ್ಟ ವಸ್ತುಗಳ ವಿಲೇವಾರಿ ನಡೆಯಬೇಕಾದರೆ ಒಂದು ಕಬ್ಬಿಣದ ಪಟ್ಟಿಗೆ ಸಿಕ್ಕಿತು. ಅದನ್ನು ತೆರೆದು ನೋಡಿದಾಗ, ಗುಂಡಪ್ಪನವರಿಗೆ, ಅವರು ನೀಡಿದ ಸೇವೆಗೆ, ಮೈಸೂರು ರಾಜ್ಯದ ಖಜಾಂಚಿಯವರ ಸಹಿ ಇದ್ದ, ಎಂದೆಂದೂ ಉಪಯೋಗಿಸಿರದ ೯೦೦, ೧೨೦೦, ೧೫೦೦ ರೂಪಾಯಿ ಮೊತ್ತದ ಹಲವಾರು ಚೆಕ್ಕುಗಳು ಸಿಕ್ಕವು. ಆಗಿನ ಕಾಲದಲ್ಲಿ ಅವುಗಳ ಬೆಲೆ ಲಕ್ಷಕ್ಕೂ ಹೆಚ್ಚು. ಎಂಥಹುದೇ ಕಷ್ಟ ಬಂದಾಗಲೂ ಒಂದೇ ಒಂದು ಚೆಕ್ಕನ್ನು ಉಪಯೋಗಿಸದೆ ತಮ್ಮ ಸ್ವಾಭಿಮಾನ ಮೆರೆದಿದ್ದರು.

ಸ್ನೇಹಿತನ ಮನಸ್ಸಿಗೆ ನೋವಾಗಬಾರದೆಂದು ಹಾಗು ತನ್ನ ಮನಸ್ಸಿಗೂ ಇರುಸುಮುರುಸಾಗಬಾರದೆಂದು ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿಕೊಂಡಿದ್ದ ಗುಂಡಪ್ಪನವರು ಅದರಿಂದ ಬಂದಿದ್ದ ಸಂಪತ್ತನ್ನು ಉಪಯೋಗಿಸದೆ, ಸ್ನೇಹವೇ ಸಂಪತ್ತು ಎಂದು ನಿರೂಪಿಸಿದ್ದರು. ಬಹಳಷ್ಟು ದೊಡ್ಡ ಮನುಷ್ಯರ ಕೆಲವೊಂದು ಉನ್ನತ ಗುಣಗಳನ್ನು ಅವರು ಮಾಡಿರುವ ಕೆಲಸಗಳಿಂದ ಅಳೆಯದೆ, ಅವರು ಮಾಡಿರದ ಕೆಲಸಗಳಿಂದ ಅಳೆಯಬಹುದಲ್ಲವೇ??

Thursday, March 29, 2012

ಗಲಾಟೆ ಗದ್ದಲ

ಬಹು ಕಾಲದ ಗೆಳೆಯರಾದ ನಾನು, ಡಾ| ಪ್ರಶಾಂತ್, ಮತ್ತು ವಿವೇಕಾನಂದ, ಪ್ರತಿ ತಿಂಗಳ ಎರಡನೆ ಶನಿವಾರ ಭೇಟಿ ಆಗುವ ಕಾರ್ಯಕ್ರಮ ಈ ಬಾರಿ ಲಾಲ್ಬಾಗ್ ನಲ್ಲಿ ನಿಗದಿ ಆಗಿತ್ತು.. ಸಂಜೆ ಎಲ್ಲರೂ ೫ ಗಂಟೆಗೆ ಸೇರಿದೆವು. ಒಳಗೆ ಹೋಗುತ್ತಿದ್ದಂತೆ. ಪಾರಿವಾಳಗಳ ಚಿಲಿಪಿಲಿ ಸದ್ದು ಎಲ್ಲ ಕಡೆ ಕೇಳುತ್ತಿತ್ತು. ಅದನ್ನು ಗಮನಿಸಿದ ವಿವೇಕ್ ಹೇಳಿದರು ಬಹುಶಃ ಎಲ್ಲ ಪಾರಿವಾಳಗಳು ಮಾತಾಡಿಕೊಳ್ಳುತ್ತವೆ ಅನ್ಸುತ್ತೆ, ಬೆಳಿಗ್ಗೆಯಿಂದ ನೀನೆಲ್ಲಿ ಹೋಗಿದ್ದೆ, ನಾನೆಲ್ಲಿ ಹೋಗಿದ್ದೆ, ಏನೇನ್ ಮಾಡಿದೆ, ಯಾರ್ಯಾರ್ ಮೈ ಮೇಲೆ ಹಿಕ್ಕೆ ಹಾಕಿದೆ ಅಂತೆಲ್ಲ.. ಅದಕ್ಕೆ ಡಾ| ಪ್ರಶಾಂತ್ ಹೇಳಿದರು ಹ್ಞೂ ನಪ್ಪ.. ಪಕ್ಷಿಗಳು ನಮ್ಮ ಹಾಗೆ.. ನಮ್ ಥರನೇ ಎಲ್ಲ ವಿಷಯ ಮಾತಾಡ್ಕೋತಾ ಇರುತ್ವೆ.
 ಇನ್ನು ಹಕ್ಕಿಗಳ ಚಿಲಿಪಿಲಿ ಎಷ್ಟೋ ವಾಸಿ, ಕೇಳಕ್ಕೆ ಸುಮಧುರವಾಗಿರುತ್ತೆ. ಆದ್ರೆ ಎಲ್ಲಾದರು ತುಂಬಾ ಜನ ಸೇರಿದರೆ ಕೇಳೋಕೆ ಆಗೋಲ್ಲ.. ಉದಾಹರಣೆಗೆ ಈ ಲಾಲ್ಬಾಗ್ ನೆ ತಗೋಳಿ.. ಇಷ್ಟು ಜನ ಮಾತಾಡ್ತಾ ಇದಾರೆ.. ಇಷ್ಟೊಂದು ಗಲಾಟೆ ಇದೆ.. ಕೇಳೋಕೆ ಎಷ್ಟು ಹಿಂಸೆ. ಯಾರು ಏನು ಮಾತಾಡ್ತಾ ಇದಾರೆ ಅಂತ ಗೊತ್ತು ಕೂಡ ಆಗಲ್ಲ.. ಆದ್ರೆ ಗದ್ದಲ ಮಾತ್ರ ಇದ್ದೆ ಇರುತ್ತೆ. ಸಾಮಾನ್ಯವಾಗಿ ಸರ್ಕಾರೀ ಬಸ್ಸಿನಲ್ಲಿ ಓಡಾಡುವ ಡಾ| ಪ್ರಶಾಂತ್ (ಈ ಬಗ್ಗೆ ನನಗೆ ಸದಾ ಹೆಮ್ಮೆ ಇದೆ) ಇಂತಹ ಬಹಳ ಅನುಭವ ಹೇಳತೊಡಗಿದರು..ಹೆಚ್ಚಾಗಿ ಸ್ಕೂಲ್ ಬಿಡುವ ಟೈಂ ನಲ್ಲಿ ಬಸ್ಸಿನ್ನಲ್ಲಿ ಸದಾ ಗಲಾಟೆ ಇರುತ್ತದೆ.. ಎಲ್ಲರೂ ಜೋರು ಜೋರಾಗಿ ಏನಾದರೂ ಮಾತಾಡ್ತಾ ಇರ್ತಾರೆ. . ಪ್ರಶಾಂತ್ ಕಷ್ಟ ಪಟ್ಟು ಅವ್ರು ಏನು ಮಾತಾಡ್ತಾ ಇದಾರೆ ಅಂತ ಗಮನಿಸೋಕೆ ಪ್ರಯತ್ನಿಸಿದರೂ ಪಕ್ಕದಲ್ಲಿದ್ದ ಇಬ್ಬರು ಮಕ್ಕಳ ಹೊರತಾಗಿ ಇನ್ನ್ಯಾರ ಮಾತುಗಳು ಸ್ಪಷ್ಟವಾಗಿ ಕೇಳುತ್ತಿರಲಿಲ್ಲವಂತೆ .. ಬರಿ ಗುಜು ಗುಜು ಅಂತ ಸದ್ದು ಮಾತ್ರ ಕೇಳುತ್ತಿತ್ತಂತೆ.

ಸುಮಾರು ಇದೇ ತರಹದ ಅನುಭವ ನನಗೂ ಇತ್ತೀಚಿಗೆ ಆಯಿತು.. ಆಫೀಸ್ ನಲ್ಲಿ ಫೈರ್ ಡ್ರಿಲ್ ನಡೆಯುತ್ತಿತ್ತು. ಇಡೀ ಆಫೀಸ್ ನ ಸಿಬ್ಬಂದಿ ಎಲ್ಲ ಒಟ್ಟಿಗೆ ಕಲೆತಿದ್ದರು. ಆಗ ಶುರು ಆಯಿತು ನೋಡಿ ಗದ್ದಲ. ನನಗೆ ಪ್ರಶಾಂತ್ ಜೊತೆಗಿನ ಸಂಭಾಷಣೆ ನೆನಪಾಯಿತು. ಕೇಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಪ್ರಶಾಂತ್ ಹೇಳಿದ್ದು ಅಕ್ಷರಶಃ ನಿಜ ಎನ್ನಿಸಿತು.. ಒಂದೇ ಒಂದು ಸಂಭಾಷಣೆ ಕೂಡ ನನ್ನಿಂದ ಸರಿಯಾಗಿ ಅರ್ಥೈಸಿಕೊಳ್ಳಲು ಆಗಲಿಲ್ಲ. ಬರಿ ಗೌಜು ಗದ್ದಲ ಬಿಟ್ಟರೆ ಬೇರೆ ಏನೂ ತಿಳಿಯುತ್ತಿರಲಿಲ್ಲ. ಎಲ್ಲರೂ ಅವರವರ ಲೋಕದಲ್ಲಿ, ಸಮಸ್ಯೆ ತೋಡಿಕೊಳ್ಳುವುದರಲ್ಲಿ ತಲ್ಲೀನರಾಗಿ ಹೋಗಿದ್ದರು. ಫೈರ್ ಡ್ರಿಲ್ ಮುಗಿಯಿತೆಂಬ ಘೋಷಣೆ ಕೂಡ ಕೇಳಿಸುತ್ತಿರಲಿಲ್ಲ.. ಏನೋ ಘೋಷಣೆ ಆಗುತ್ತಿದೆ ಎಂದು ಯಾರೋ ಕಿರುಚಿದಾಗ, ಎಲ್ಲರೂ ನಿಶಬ್ದವಾಗಿ ನಿಂತರು.. ಫೈರ್ ಡ್ರಿಲ್ ಮುಗಿಯಿತೆಂದು ಗೊತ್ತಾದ ತಕ್ಷಣ ಎಲ್ಲರೂ ತಮ್ಮ ತಮ್ಮ ಡೆಸ್ಕ್ ಗಳ ಕಡೆ ನಡೆಯತೊಡಗಿದರು.. ಮತ್ತದೇ ಗೌಜು ಗದ್ದಲಗಳೊಂದಿಗೆ..
ಆಗ ಅನಿಸಿತು.. ಇಡೀ ಭೂಮಂಡಲದ ಸದ್ದು, ಗಲಾಟೆ, ಗೌಜುಗಳ ನಡುವೆ ಪ್ರಕೃತಿ ಮಾತೆಯ ಕಿವಿಗಳು ತೂತು ಬಿದ್ದಿರಬಹುದಲ್ಲವೇ.. ??

Monday, November 21, 2011

ಅಣ್ಣಾ ಬಾಂಡ್ !!!

ಅಣ್ಣಾ ಬಾಂಡ್ ಎಂದರೆ ಒಂದು ಬ್ರಾಂಡ್.. ಒಂದು ಟ್ರೆಂಡ್.. ಇಷ್ಟು ಹೊತ್ತಿಗೆ ನಿಮಗೂ ಗೊತ್ತಾಗಿರಬಹುದು ಯಾರ ಬಗ್ಗೆ ನಾನು ಹೇಳಲು ಹೊರಟಿದ್ದೇನೆಂದು.. ಅದೇ.. ಡಾ|| ರಾಜ್ ಕುಮಾರ್ ಬಗ್ಗೆ...
ಕಲೆ: ಶ್ರೀಯುತ ಸು. ವಿ. ಮೂರ್ತಿ
ಸರಿಸುಮಾರು 50 ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟಸಾರ್ವಭೌಮ ಡಾ|| ರಾಜ್ ಕುಮಾರ್ ಬಗ್ಗೆ ತಿಳಿಯದವರು ಯಾರಾದರೂ ಇರುವರೇ?? ಅವರ ವಿಭಿನ್ನ ಅಭಿನಯದಿಂದ ಆಬಾಲವೃದ್ಧರಾದಿಯಾಗಿ ಎಲ್ಲರ ಮನಸೂರೆ ಮಾಡಿದ ಅಣ್ಣಾವ್ರನ್ನ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭೂಮಿಗೆ ಕರೆಸಲು ನಮ್ಮ ಗಾಂಪರ ಗುಂಪು ಆಲೋಚಿಸಿತು.. ಅಭಿಮಾನಿಗಳೇ ದೇವರು ಎಂದು ತಿಳಿದಿರುವ ಅಣ್ಣಾವ್ರು ಇಲ್ಲ ಅನ್ನುತ್ತಾರೆಯೇ? ಅವ್ರು ಬರೋದು ಗೊತ್ತಾಗುತ್ತಿದ್ದಂತೆ ನಮ್ಮ ಪತ್ರಕರ್ತರೆಲ್ಲ ಅವರ ಸಂದರ್ಶನ ಮಾಡಲು ದೌಡಾಯಿಸಿದರು.

ಕಾರ್ಯಕ್ರಮ ಸಂಘಟಕರು ಅಣ್ಣಾವ್ರ ಸನ್ಮಾನದ ದಿನ ಪತ್ರಕರ್ತರೊಡನೆ ಸಂದರ್ಶನಕ್ಕೆ ಸಮಯ ನಿಗದಿ ಪಡಿಸಿದರು.

ಸಮಯ: ಬೆಳಿಗ್ಗೆ 10:30.

ಅಣ್ಣಾವ್ರು ಬಿಳಿ ಪಂಚೆ, ಬಿಳಿ ಶರ್ಟು ಹಾಕಿ ತಮ್ಮ ಟ್ರೇಡ್-ಮಾರ್ಕ್ ಗೆಟಪ್ಪಿನಲ್ಲಿ ಪತ್ರಕರ್ತರ ಎದುರು ಕುಳಿತುಕೊಂಡರು.. ಶುರುವಾಯಿತು ಪ್ರಶ್ನೆಗಳ ಸುರಿಮಳೆ..

ಪ್ರಶ್ನೆ: ಅಣ್ಣಾವ್ರೆ, ನಿಮ್ಮನ್ನ ನೋಡಿ ಬಹಳ ಖುಷಿಯಾಯಿತು.. ಹೇಗಿದ್ದೀರ?.. ಹೇಗಿದೆ ಸ್ವರ್ಗ?
ಅಣ್ಣಾವ್ರು: ಆ ಆಹಾ.. ನಾನು ಚೆನ್ನಾಗಿದ್ದೀನ್ರಪ್ಪ.. ನೀವೆಲ್ಲ ಹೇಗಿದ್ದೀರ? ನೋಡಿ ಬಾಳ ಆನಂದವಾಯ್ತು... ಅಭಿಮಾನಿ ದೇವ್ರುಗಳು ಇಲ್ದೆ ಇರೋ ಸ್ವರ್ಗ ಸ್ವರ್ಗನೇನ್ರಪ್ಪ?.. ಇಲ್ಲ ಇಲ್ಲ, ಕಂಡಿತ ಇಲ್ಲ.. ಇಲ್ಲಿರೋ ವಾತವರಣ, ಅಭಿಮಾನಿ ದೇವರುಗಳ ಪ್ರೀತಿ, ಆ ವಿದ್ಯಾರ್ಥಿ ಭವನ್ ದೋಸೆ, ಎಂ ಟಿ ಆರ್ ತಿಂಡಿಗಳು, ಕನ್ನಡ ಚಿತ್ರರಂಗ, ಶುಕ್ರವಾರ ಬಂದ್ರೆ ಡಬ್ಬದಿಂದ ಬೆಳಕು ಕಾಣೋ ಡಬ್ಬಾ ಕನ್ನಡ ಚಿತ್ರಗಳು.. ಎಲ್ಲದನ್ನೂ ಮಿಸ್ ಮಾಡ್ಕೊತಾ ಇದೀನಿ ಕಣ್ರಯ್ಯ..

ಪ್ರಶ್ನೆ: ಹೇಗೆ ಅನ್ನಿಸ್ತಾ ಇದೆ ಬೆಂಗಳೂರು?
ಅಣ್ಣಾವ್ರು: ಟ್ರಾಫಿಕ್ ತುಂಬಾ ಜಾಸ್ತಿ ಆಗಿದೆ ಅನ್ಸುತ್ತೆ.. ಆದ್ರೂ ಪಾಪ ನಮ್ಮ ಸರ್ಕಾರದವರು ಮೆಟ್ರೋ ಅದು ಇದು ಅಂತ ಏನಾದ್ರೂ ಮಾಡ್ತಾನೇ ಇರ್ತಾರೆ ನೋಡಿ. ಒಟ್ನಲ್ಲಿ ಜನಗಳಿಗೆ ಒಳ್ಳೆದಾದ್ರೆ ಸಾಕು ನೋಡಿ.. ಮೆಟ್ರೋನಲ್ಲಿ ಹೋಗಿದ್ದೆ ಕಣ್ರಪ್ಪ.. ಬಾಳ ಚೆನ್ನಾಗ್ ಮಾಡಿದಾರೆ.. ನಮ್ ಜನ ಅದನ್ನ ಹೆಂಗೆ ನೋಡ್ಕೋತಾರೆ ಅಂತ ನೋಡ್ಬೇಕು..

ಪ್ರಶ್ನೆ: ಈಗಿನ ರಾಜಕೀಯ ಪರಿಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯ?
ಅಣ್ಣಾವ್ರು: ನಮಗೂ ರಾಜಕೀಯಕ್ಕೂ ಬಾಳ ದೂರ. ಅದ್ರೂ ಕೇಳಿ ಬಾಳ ಬೇಜಾರಾಯ್ತು.. ಜನಕ್ಕೆ ಸಾಧ್ಯವಾದಷ್ಟು ಒಳ್ಳೇದು ಮಾಡ್ಬೇಕು.. ಆಗಿಲ್ಲ ಅಂದ್ರೆ ಕೆಟ್ಟದ್ದನ್ನು ಮಾತ್ರ ಮಾಡ್ಲೇಬಾರ್ದು.. ಈಗ ನೋಡಿ.. ಎಲ್ಲ ಒಬ್ಬೂಬ್ಬರಾಗಿ ಜೈಲ್ ಸೇರ್ತಾ ಇದಾರೆ.. ಉಪ್ಪು ತಿಂದವರು ನೀರು ಕುಡಿಲೇಬೇಕು.. ತ್ರೇತಾಯುಗದಲ್ಲಿ ರಾಮ, ದ್ವಾಪರಯುಗದಲ್ಲಿ ಕೃಷ್ಣ ಇದ್ಹಂಗೆ, ಈ ಕಾಲದಲ್ಲಿ ನಮ್ಮ ಲೋಕಾಯುಕ್ತ ಹೆಗ್ಡೆಯವರು, ಅಣ್ಣಾ ಹಜಾರೆ ಅವ್ರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡ್ಸೋ ಕೆಲಸ ಮಾಡ್ತಾ ಇದಾರೆ.. ಕೇಳಿದ್ರೆ ಬಾಳ ಆನಂದ ಆಗುತ್ತೆ.. ಆ ಆಹಾ..

ಪ್ರಶ್ನೆ: ಈಗಿನ ಚಲನಚಿತ್ರಗಳ/ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯ..
ಅಣ್ಣಾವ್ರು: ನೋಡಿ.. ನಮ್ ಕಾಲದಲ್ಲಿ ಒಳ್ಳೊಳ್ಳೇ ಚಿತ್ರ ಬರೋವು.. ಕಾದಂಬರಿ ಆಧಾರಿತ ಚಿತ್ರ ಬರ್ದೇ ಎಷ್ಟು ಸಮಯ ಆಗಿದೆ ನೀವೇ ಲೆಕ್ಕಹಾಕಿ.. ರೀಮೇಕ್ ಮಾಡ್ತಾ ಕೂತಿದ್ರೆ ಚಿತ್ರರಂಗ ಹೇಗಪ್ಪ ಉದ್ದಾರ ಆಗುತ್ತೆ.?? ಸ್ವಮೇಕ್ ಕೂಡ ಮಾಡ್ರಪ್ಪ.. ಒಳ್ಳೆ ಕಾದಂಬರಿ ಆಧಾರಿತ ಚಿತ್ರ ಮಾಡಿ, ಒಳ್ಳೆ ಕಥೆ ಆಯ್ಕೆ ಮಾಡ್ಕೊಳಿ.. ಆಗ ನೋಡಿ ನಮ್ ಚಿತ್ರರಂಗ ಹೇಗೆ ಮುಂದುವರಿಯುತ್ತೆ ಅಂತ..

ಪ್ರಶ್ನೆ: ನಿಮ್ ಮಗ ಪುನೀತ್ 'ಹುಡುಗರು' ಅಂತ ರೀಮೇಕ್ ಚಿತ್ರ ಮಾಡಿದ್ದಾರಲ್ಲ..?
ಅಣ್ಣಾವ್ರು: ನೋಡಪ್ಪ ನಮ್ ಕಂಪನಿಯಿಂದ ಇದುವರೆಗೂ ರೀಮೇಕ್ ಮಾಡೇ ಇರ್ಲಿಲ್ಲ.. ಈಗ ಕಾಲ ಬದಲಾಗಿದೆ. ಜನಕ್ಕೆ ಏನಾದ್ರೂ ಒಳ್ಳೆ ಸಂದೇಶ ಕೊಡ್ಬೇಕು ಅನ್ನೋ ಪ್ರಯತ್ನ ಮಾಡಿದಾರೆ ಅಷ್ಟೇ.. ನಮ್ ಶಿವಣ್ಣನ್ನೇ ನೋಡಿ.. ರೀಮೇಕ್ ಮಾಡಲ್ಲ ಅಂತ ಹೇಳಿ ಶಪಥ ಮಾಡಿದಾನೆ.. ಅದನ್ನ ಪಾಲಿಸ್ತ ಇದಾನೆ ಕೂಡ. ಇನ್ನು ಪುನೀತ್ ಕೂಡ ಒಳ್ಳೊಳ್ಳೆ ಚಿತ್ರ ಮಾಡ್ತಾ ಇರ್ತಾನೆ.. ಅವ್ನ ಡಾನ್ಸು, ಹೊಡೆದಾಟ ಎಲ್ಲ ಚೆನ್ನಗಿರುತ್ತೆ.. ಮೊನ್ನೆ ಜಾಕಿ ಚಿತ್ರದಲ್ಲಿ ಸುಮಾರ್ ಜನನ್ನ ಮೇಲಕ್ಕೆ ಕಳ್ಸಿದ್ದ.. ನಮ್ಮ ಯಮರಾಜ್ರು ಅಪ್ಪು ಆಕ್ಷನ್ ಚಿತ್ರಗಳ ದೊಡ್ಡ ಫ್ಯಾನ್.. ಅವ್ರ ಕೆಲಸ ಸುಲಭ ಮಾಡ್ತಾನೆ ನೋಡಿ..

ಪ್ರಶ್ನೆ: ಈಗ ಬಿಡುಗಡೆ ಆಗ್ತಿರೋ ಚಿತ್ರಗಳ ಬಗ್ಗೆ ಒಂದೆರಡು ಮಾತು..
ಅಣ್ಣಾವ್ರು: ಸ್ವಲ್ಪ ಬೇಜಾರಗುತ್ತೆ ಕಣ್ರಪ್ಪ.. ನೀವೇ ನೋಡಿ.. ನಮ್ ದೂದ್ ಪೇಡ.. ಕನ್ನಡದ ಹುಡ್ಗ ದಿಗಂತ್ ಮಾಡಿರೋ ಚಿತ್ರಗಳು ಪ್ರತಿವಾರ ಒಂದೊಂದು ರಿಲೀಸ್ ಆಗ್ತಿದೆ. ಫಸ್ಟು ಲೈಫು ಇಷ್ಟೇನೆ, ಅದಾದ ಮೇಲೆ ಪುತ್ರ.. ನಂತರ ತಾರೆ.. ಈ ವಾರ ಕಾಂಚಾಣ... 4 ವಾರ 4 ಚಿತ್ರ ಒಂದೇ ಹೀರೋದು ರಿಲೀಸ್ ಆದ್ರೆ ಜನ ಎಷ್ಟು ಅಂತ ನೋಡ್ತಾರೆ? ಇದ್ರಿಂದ ಯಾರ್ಗೂ ಲಾಭ ಇಲ್ಲ..

ಪ್ರಶ್ನೆ: ನಿಮಗೆ ಈಗ ಅಭಿನಯ ಮಾಡಲು ಅವಕಾಶ ಸಿಕ್ರೆ ಯಾವ ನಿರ್ದೇಶಕರ ಜೊತೆ ಕೆಲಸ ಮಾಡಲು ಇಷ್ಟಪಡ್ತೀರ?
ಅಣ್ಣಾವ್ರು: ಎಲ್ಲರ ಹತ್ರನೂ ಕಲಿಯೋಕೆ ಒಂದೊಂದು ವಿಷ್ಯ ಇರುತ್ತೆ ಅನ್ನೋದು ನನ್ನ ಅನುಭವ.. ಆದ್ರೂ ಚಾನ್ಸ್ ಸಿಕ್ರೆ ಯೋಗರಾಜ್ ಭಟ್, ಉಪೇಂದ್ರ, ಸೂರಿ ಅವ್ರ ಚಿತ್ರಗಳಲ್ಲಿ ಅಭಿನಯಿಸೋ ಆಸೆ ಇದೆ..

ಪ್ರಶ್ನೆ: ನೀವು ಒಳ್ಳೆ ಗಾಯಕರು.. ಮತ್ತು ರಂಗಭೂಮಿಯಿಂದ ಬಂದಿರೋರು.. ಈಗಿನ ಚಿತ್ರಗಳಲ್ಲಿರೋ ಸಂಗೀತ-ಸಾಹಿತ್ಯದ ಬಗ್ಗೆ?
ಅಣ್ಣಾವ್ರು: ಹರಿಕೃಷ, ಅರ್ಜುನ, ವೀರ ಸಮರ್ಥ, ಶ್ರೀಧರ್ ಥರ ಒಳ್ಳೊಳ್ಳೆ ಸಂಗೀತ ನಿರ್ದೇಶಕರು ಬಂದಿದ್ದಾರೆ.. ನಮ್ ಯೋಗರಾಜ್ ಭಟ್ರು, ಜಯಂತ್ ಕಾಯ್ಕಿಣಿ, ಕವಿರಾಜ್ ಅವ್ರ ಸಾಹಿತ್ಯಗಳು ಅಮೋಘವಾಗಿದೆ.. ಸೋನು ನಿಗಮ್ ಹಾಡುಗಳಂತೂ ದೇವಲೋಕದಲ್ಲೂ ಫೇಮಸ್ಸು.. ಇಂದ್ರ ಯಾವಾಗ್ಲೂ ಹಾಕ್ತ ಇರ್ತಾನೆ.. ಯಮರಾಜರಿಗಂತೂ ಕೈಲಾಶ್ ಖೇರ್ ಹಾಡಿರೋ ಹಾಡ್ಗಳು ಸಿಕ್ಕಾಪಟ್ಟೆ ಇಷ್ಟ..

ಪ್ರಶ್ನೆ: ಹಾಗಾದ್ರೆ ಪಂಕಜ.. ಊರಿಗೊಬ್ಳೆ ಪದ್ಮಾವತಿ.. ಅಂತ ಹಾಡುಗಳು ಇರ್ಬೇಕು ಅಂತಿರ..?!
ಅಣ್ಣಾವ್ರು: (ನಗುತ್ತಾ) ಅದೇನೋ ನಾ ಕಾಣೆ ಶಿವ.. ನನ್ಗಿರೋದ್ ಒಬ್ಳೆ ಪಾರ್ವತಿ..

ಸರಿ, ನಾನು ಹೊರ್ಡ್ತಿನ್ರಪ್ಪ.. ಅಲ್ಲಿ ನಮ್ ಸಾಹಸಸಿಂಹ ಕಾಯ್ತಾ ಇರ್ತಾರೆ..

(ಅಣ್ಣಾವ್ರ ಹಾಗೂ ಅಣ್ಣಾವ್ರ ಸಮಸ್ತ ಅಭಿಮಾನಿ ದೇವರುಗಳ ಕ್ಷಮೆ ಕೋರಿ..)

Friday, September 2, 2011

ಕನ್ನಡ ಗಂಗೆಯಲಿ ಮೀಯುವೆ ನಾನೀಗ..

ನಮಸ್ಕಾರ ಗೆಳೆಯರೇ..
ಗಣೇಶ ನೀರಲ್ಲಿ ಮುಳುಗಿ, ಜನವರಿಯಲ್ಲಿ ಅಣ್ಣಮ್ಮ ಬರೋದ್ರೊಳಗೆ ನವೆಂಬರ್ ಮಧ್ಯೆ ಬರ್ತಾ ಇದೆ.. ಕನ್ನಡಮ್ಮನ ಸೇವೆ ಮಾಡಲು ಎಷ್ಟೆಷ್ಟೋ ತರಹದ ಪ್ರಯತ್ನ ಮಾಡುವವರಿದ್ದಾರೆ. ಕೆಲವರದು ಪ್ರಾಮಾಣಿಕ ಪ್ರಯತ್ನವಾದರೆ, ಕೆಲವರದು ಬರಿ ತೋರಿಕೆಯ ಕನ್ನಡ ಪ್ರೇಮ.. ಇಂಥಹವರ ಮಧ್ಯೆ ನನ್ನ ಸ್ನೇಹಿತರಾದ ಡಾ| ಪ್ರಶಾಂತ್ ವಿಭಿನ್ನ ರೀತಿಯ ಕನ್ನಡ ಸೇವೆ ಮಾಡಲು ತಯಾರಾಗುತ್ತಿದ್ದಾರೆ. ಕಹಳೆ ಎಂಬ ಕನ್ನಡ ಅಂತರ್ಜಾಲ ತಾಣವೊಂದನ್ನು ತಯಾರಿಸಿದ್ದಾರೆ.
ಬಹಳ ದಿನಗಳಿಂದ ನಾವಿಬ್ಬರೂ ಇದರ ಬಗ್ಗೆ ಚರ್ಚೆ ನಡೆಸಿ, ಈಗ ಅದನ್ನು ಕಾರ್ಯರೂಪಕ್ಕೆ ತರಲು ಅಣಿಯಾಗಿದ್ದೇವೆ. ಕನ್ನಡದ ಬಗ್ಗೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಅಂತರ್ಜಾಲ ತಾಣಗಳಿವೆ ಮತ್ತು ಗೂಗಲ್ ಕೂಡಾ ಕೆಲವೊಮ್ಮೆ ಕನ್ನಡದ ಬಗ್ಗೆ ಏನಾದರೂ ಹುಡುಕಾಟ ನಡೆಸಿದರೆ ಉತ್ತರ ನೀಡದೆ ಬೆಪ್ಪನಾಗುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡಕ್ಕೆ ಏನಾದರೂ ನೀಡಬೇಕು.. ಅಂತರ್ಜಾಲದಲ್ಲಿ ಕನ್ನಡದ ಕೊರತೆ ನೀಗಿಸಬೇಕು ಎಂಬುದು ನಮ್ಮ ಪುಟ್ಟ ಪ್ರಯತ್ನ.

ಪ್ರತಿ ವರ್ಷದ ನವೆಂಬರ್ ತಿಂಗಳಲ್ಲಿ ಪ್ರತಿ ದಿನ ಒಂದೊಂದು ಲೇಖಕರಿಂದ ನಾಡು ನುಡಿ ಸಂಸ್ಕೃತಿ ಕುರಿತಾದ ಬರವಣಿಗೆಯನ್ನೂ ಕಹಳೆ ಯಲ್ಲಿ ಮುದ್ರಿಸಲಾಗುವುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ತುಂಬಾ ಆಗತ್ಯ. ನೀವು ಲೇಖನಗಳನ್ನು ಬರೆಯಬೇಕು ಎಂದೇನಿಲ್ಲ. ಅಲ್ಲಿ ಬಿತ್ತರಿಸಲಾಗುವ ಲೇಖನಗಳಿಗೆ ನಿಮ್ಮ ಕಾಮೆಂಟ್ಸ್ಗಳಿಂದ ಪ್ರೋತ್ಸಾಹ ನೀಡಿದರೆ, ಲೇಖಕನಿಗೆ ಅಂತಹ ಹತ್ತು ಹಲವಾರು ಲೇಖನ ಬರೆಯುವ ಹುಮ್ಮಸ್ಸು, ಉತ್ಸಾಹ ಬರುತ್ತದೆ.. ಇದನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ, ಅವರಲ್ಲಿ ಯಾರಿಗಾದರೂ ಇದರ ಬಗ್ಗೆ ಆಸಕ್ತಿ ಇದ್ದು ಅವರು ಕಹಳೆಗೆ ತಮ್ಮ ಕೊದುಗೆಯನ್ನು ನೀಡಿದರೆ ಅದೂ ಸಹ ಕನ್ನಡಕ್ಕೆ ನೀವು ಮಾಡುವ ಸೇವೆ.
ಗಣೇಶ ಹಬ್ಬದ ಶುಭದಿನದಂದು, ವಿಘ್ನನಿವಾರಕನ ಆಶೀರ್ವಾದಗಳೊಂದಿಗೆ ಹಾಗೂ ನಿಮ್ಮೆಲ್ಲರ ಪ್ರೀತಿಪೂರ್ವಕ ಮತ್ತು ಉತ್ಸಾಹದಾಯಕ ಪ್ರೋತ್ಸಾಹದ ನಿರೀಕ್ಷೆಯೊಂದಿಗೆ ಕಹಳೆಯನ್ನು ಕನ್ನಡಿಗರಿಗೆ ಸಮರ್ಪಿಸಿದ್ದೇವೆ; ನಾವೆಲ್ಲರೂ ಇದನ್ನು ಉಳಿಸಿ ಬೆಳೆಸೋಣ.
ಕಹಳೆಗೆ ಇಂದೇ ಭೇಟಿ ಕೊಡಿ ಮತ್ತು ಅಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಏನಾದರೂ ಕೊಡುಗೆ ನೀಡಿ ಎಂದು ನನ್ನ ಸವಿನಯ ಪ್ರಾರ್ಥನೆ.

ಗಣೇಶ ಬಂದ.. ಏನೇನ್ ತಂದ?

ಮೊದಲಿಗೆ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ಗಣೇಶ ತನ್ನ ಹಾಸ್ಯಭರಿತ ಕಥೆಗಳಿಂದ, ತನ್ನ ಹೊಟ್ಟೆಬಾಕತನದಿಂದ, ತನ್ನ ಬುದ್ಧಿವಂತಿಕೆಯಿಂದ ಎಲ್ಲರಿಗೂ ಪ್ರಿಯವಾದ ದೇವರು. ಹೇಗೆ ಜನ ಏನಾದರು ಮಾಡುವಾಗ ತನ್ನ ಪ್ರೀತಿಪಾತ್ರರನ್ನು ನೆನೆಸಿಕೊಳ್ಳುತ್ತಾರೋ, ಹಾಗೆ ಪ್ರತಿಯೊಂದು ಶುಭ ಕಾರ್ಯಕ್ರಮಗಳಲ್ಲೂ ಗಣೇಶನಿಗೆ ಪ್ರಥಮ ಆದ್ಯತೆ. ಗಣೇಶನ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಇಂದಿಗೂ ಸಹ ಭಾರತದಲ್ಲಿ ಎಲ್ಲ ಜಾತಿ ಮತಗಳವರೂ ಆರಾಧಿಸುವ ದೇವರು ಗಣೇಶ. ಪ್ರತಿ ರಸ್ತೆರಸ್ತೆ ಗಳಲ್ಲೂ ಗಣೇಶೋವಿದೇಶಗಳಲ್ಲೂ ಗಣೇಶನ ಆರಾಧಕರಿದ್ದಾರೆ, ದೇವಾಲಯಗಳಿವೆ. ಹೀಗೆ ಪ್ರತಿಯೊಂದು ಕಾರ್ಯಕ್ಕೂ, ಗಣೇಶ ಬೇಕೇ ಬೇಕ್ ಕಣೋ.. J

ಗಣೇಶನನ್ನು ಇಷ್ಟ ಪಡದೆ ಇರುವವರಿಲ್ಲ. ತನ್ನ ಗಾತ್ರದಿಂದ, ವಿಚಿತ್ರವಾದ ಆಕರದಿಂದ ಎಲ್ಲರ ಗಮನ ಸೆಳೆಯುತ್ತಾನೆ. ಮಕ್ಕಳಿಗಂತೂ ಗಣೇಶ ಎಂದರೆ ಪ್ರಾಣ ಏಕೆಂದರೆ ಆತನ ಕಥೆಗಳೆಲ್ಲವೂ ವೈವಿಧ್ಯತೆಯಿಂದ ಕೂಡಿರುತ್ತದೆ. ತನ್ನ ಹಲ್ಲನ್ನೇ ಮುರಿದುಕೊಂಡು ವೇದವ್ಯಾಸರಿಗಾಗಿ ಮಹಾಭಾರತ ಬರೆದಿದ್ದಿರಬಹುದು, ತಂದೆ ತಾಯಿಗೆ ಮೂರು ಸುತ್ತು ಬಂದು ವಿಶ್ವ ಪರ್ಯಟನೆ ಮುಗಿಸಿದ್ದಿರಬಹುದು, ಹೊಟ್ಟೆ ಒಡೆದು ಚಂದ್ರ ನಕ್ಕಾಗ ಹಾವನ್ನೇ ಹೊಟ್ಟೆಗೆ ಸುತ್ತಿಕೊಂಡಿದ್ದಿರಬಹುದು, ಕುಬೇರನ ಗರ್ವಭಂಗ ಮಾಡಿದ್ದಿರಬಹುದು, ಹಲವು ರಕ್ಕಸರ ಅಂತ್ಯ ಕಾಣಿಸಿದ್ದಿರಬಹುದು, ಅಥವ ಗಣೇಶನ ಜನನದ ಕಥೆಯೂ ಇರಬಹುದು.. ಇದೆಲ್ಲವೂ ಮಕ್ಕಳಲ್ಲಿ ಬಹು ಪ್ರಸಿದ್ಧ.
ಇಂತಹುದೇ ಒಂದು ಕಥೆಯನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಗಣೇಶ ತಾರುಣ್ಯದ ಹೊಸ್ತಿಲಲ್ಲಿ ಇದ್ದಾಗ ಎಲ್ಲ ದೇವತೆಗಳು ಗಣೇಶನನ್ನು ಪೀಡಿಸತೊಡಗಿದರು.. ಗಣೇಶ ನಿನ್ನ ಮದುವೆ ಯಾವಗಪ್ಪ ಅಂತ. ಗಣೇಶ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದೆ ತನ್ನ ತಾಯಿಯ ಬಳಿ ಬಂದು ಕೇಳುತ್ತಾನೆ ಅಮ್ಮ ನಂಗು ಮದುವೆ ಮಾಡಮ್ಮ ಆ ತಾಯಿಯ ಚಿಂತೆಯೇ ಬೇರೆ. ಈ ವಿಚಿತ್ರ ಆಕಾರದ ಮಗನಿಗೆ ಹುಡುಗಿ ಎಲ್ಲಿಂದ ತರುವುದಪ್ಪ ಎಂದು.. ತಕ್ಷಣಕ್ಕೆ ತಪ್ಪಿಸಿಕೊಳ್ಳಲು ನಾಳೆ ಬಾ ಎಂದು ಹೇಳುತ್ತಾಳೆ. ಮರುದಿನ ಗಣೇಶ ಬಂದು ಕೇಳಿದ..ಅಮ್ಮ ಯಾವಾಗಮ್ಮ ನನ್ನ ಮದುವೆ? ನಾನು ಹೇಳಿದ್ದು ಇವತ್ತಲ್ಲ.. ನಾಳೆ ಬಾ ಹೀಗೆ ಪ್ರತಿದಿನವು ಪಾರ್ವತಿ ನಾಳೆ ಬಾ ಎಂದು ಹೇಳಿ ಅವನನ್ನು ಸಾಗಹಾಕತ್ತಿರುತ್ತಾನೆ.
ಹೀಗೆ ನಡೆಯುತ್ತಿರುವಾಗ, ಒಮ್ಮೆ ಶನಿ ದೇವರು ಬಂದು, ನಿನಗೆ ಇಂದಿನಿಂದ ೭-೧/೨ ವರ್ಷಗಳ ಕಾಲ ಶನಿ ಕಾಟ ಇದೆ. ನಾನು ನಿನ್ನನ್ನು ಹಿಡಿದುಕೊಳ್ಳಲು ಬಂದಿದ್ದೇನೆ ಎಂದಾಗ, ಗಣೇಶ ತನ್ನ ತಾಯಿಯ ಮಾರ್ಗ ಅನುಸರಿಸುತ್ತಾನೆ. ನಾಳೆ ಬಾ. ಹೀಗೆ ಪ್ರತಿ ದಿನ ಶನಿದೇವ ಬಂದಾಗಲೆಲ್ಲ.. ನಾಳೆ ಬಾ.. ನಾಳೆ ಬಾ ಎಂದು ಸಾಗ ಹಾಕುತ್ತಿರುತ್ತಾನೆ. ಹೀಗೆ ಶನಿ ಕಾಟ ಇಲ್ಲದ ಏಕೈಕ ದೇವರು ಗಣೇಶ.
ಇಂತಿಪ್ಪ ನಮ್ಮ ಗಣೇಶ ಈ ಬಾರಿ ಭೂಮಿಗೆ ಬಂದಾಗ ಅವನ ಅವಸ್ಥೆ ಹೇಳ ತೀರದು.. ಆಜನ್ಮ ಬ್ರಹ್ಮಚಾರಿ ಯಾದ ಗಣೇಶನ ಮೇಲೆ ಬದ್ನಾಮ್ ಮುನ್ನಿಯ ಕಣ್ಣು ಬಿದ್ದಿದೆ, ಶೀಲ ತನ್ನ ಜವಾನಿಯ ಸೆರಗು ಹಾಸಿ ಗಣೇಶನ ಮನಸನ್ನು ಕೆಣಕುತ್ತಿದ್ದಾಳೆ. ರಸ್ತೆ ರಸ್ತೆಗಳಲ್ಲಿ ಹಿರಿಯರಿಗೆ ತೊಂದರೆ ಉಂಟು ಮಾಡಿಯಾದರೂ, ಗಣೇಶ ಕೇಳದಿದ್ದರೂ, ಗಣೇಶೋತ್ಸವ ವಿಜ್ರಂಭಣೆಯಿಂದ ಸಾಗಿದೆ..
ಗಣೇಶನಿಗೂ ಅಣ್ಣ ಹಜಾರೆಯವರ ಟೋಪಿ ತೊಡಿಸಲಾಗಿದೆ.. ಒಸಮ ಬಿನ್ ಲಾಡೆನ್ ನ ಭಯ ಇಲ್ಲದಿದ್ದರೂ, ಕಚಡ ರಾಜಕಾರಿಣಿಗಳು ಎಲ್ಲಿ ತನನ್ನು ತಮ್ಮ ಪಕ್ಷಕ್ಕೆ ಸೇರಿಸ್ಕೊಂಡು ತನ್ನನ್ನು ಭ್ರಷ್ಟನನ್ನಾಗಿ ಮಾಡಿಬಿಡುತ್ತಾರೆಂಬ ಭಯ ಇದ್ದೆ ಇದೆ. ಚೌತಿಯ ದಿನ ಚಂದ್ರನನ್ನು ನೋಡಿ ತಮ್ಮ ಮೇಲೆ ಬಂದಿರುವ ಅಪಾದನೆಯನ್ನು ನನ್ನ ಶಾಪದ ಮೇಲೆ ಹಾಕಿ ತಪ್ಪಿಸಿಕೊಳ್ಳುವ ದುಷ್ಟ ಜನರಿಂದ ಹೇಗಪ್ಪ ಪಾರಾಗುವುದು ಎಂಬ ಆತಂಕ ಗಣೇಶನದು. ರಂಜಾನ್ ಕೂಡಾ ಜೊತೆಗೆ ಬಂದಿದ್ದರಿಂದ ಎಲ್ಲ ರಸ್ತೆ ಗಳು ಖಾಲಿ ಖಾಲಿ.., ಮುಸ್ಲಿಮರ ಏರಿಯ ಗಳಲ್ಲಿ ಯಾ ಅಲಿ ಯಾ ಅಲಿ..  ಹಿಂದೂಗಳ ಏರಿಯದಲ್ಲಿ ಹಬ್ಬದೂಟ ಎಲ್ಲರ ಬಾಯಲ್ಲಿ..
ಗಣೇಶ ನಿಮ್ಮಲ್ಲೆರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತ, ಗಣೇಶ ಸೇಫ್ ಆಗಿ ಕೈಲಾಸಕ್ಕೆ ಹೋಗಲಿ ಎಂದು ಆಶಿಸುತ್ತೇನೆ.

Wednesday, August 31, 2011

Father "Godfather" ಆದ ಕಥೆ.. !!!

ನನಗೆ ಮೇರಿ ಡೀನ ಆಶಾ ಎಂಬ ಕ್ರಿಶ್ಚಿಯನ್ ಸ್ನೇಹಿತೆ ಒಬ್ಬರಿದ್ದರು. ನಾವು  Heartland ಎಂಬ ಕಂಪನಿಯಲ್ಲಿ ಮುಂಚೆ ಒಟ್ಟಿಗೆ ಕೆಲಸ ಮಾಡಿದ್ದೆವು.. ಅವರಿಗಿದ್ದ ಕೆಲವೇ ಕೆಲವು ಸ್ನೇಹಿತರಲ್ಲಿ ನಾನು ಒಬ್ಬ. ಅವರಿಗೆ ಮದುವೆ ಆಗಿ ಕೆಲಸ ಬಿಟ್ಟು ಹೋಗಿದ್ದರು.. ಮದುವೆಗೆ ಕರೆದಿದ್ದರೂ ಸಹ, ಚೆನ್ನೈನಲ್ಲಿ ಇದ್ದಿದ್ದರಿಂದ ಹೋಗಲು ಆಗಿರಲಿಲ್ಲ. ನಾನು ಸಹ  Zentech ಎಂಬ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ನಮ್ಮಿಬ್ಬರ ನಡುವೆ ಅಷ್ಟೊಂದು communication ಇರಲ್ಲಿಲ್ಲ.

ಒಂದು ದಿನ Gmail ನಲ್ಲಿ ಆಶಾ ಮಗುವಿನ ನಾಮಕರಣದ Invitation ಬಂತು.. ಸ್ಥಳ ಬೆಂಗಳೂರಿನ townhall ಬಳಿ ಇರುವ church ನಲ್ಲಿ ಎಂದಿತ್ತು. ಭಾನುವಾರವು ಆಗಿದ್ದರಿಂದ ಸರಿ ಹೋಗೋಣ; ಹಳೆಯ heartland ಸ್ನೇಹಿತರು ಬರಬಹುದು ನೋಡಿದ ಹಾಗಾಗುತ್ತೆ ಎಂದು ಕಾರ್ಯಕ್ರಮಕ್ಕೆ ಹೋಗುವ ಮನಸು ಮಾಡಿದೆ.. ಆದರೆ ಆ ದಿನ ನನ್ನ ಜೀವನದಲ್ಲಿ ಮರೆಯಲಾರದ ದಿನವಾಗುತ್ತದೆಂದು ಎಂದೂ ಭಾವಿಸಿರಲಿಲ್ಲ. ಆಶಾ ಕೂಡ ಫೋನ್ ಮಾಡಿ ಮನೆಯವರೊಂದಿಗೆ ಬರಲೇ ಬೇಕೆಂದು ಒತ್ತಾಯ ಮಾಡಿ ಕರೆದರು.. ಜೊತೆಯಲ್ಲಿ Vegetarian ಊಟ ಎಂದು ಎರಡೆರಡು ಬಾರಿ ಹೇಳಿದರು. ಏಕೆಂದರೆ ಮುಂಚೆ ವೆಜ್  ನಾನ್ ವೆಜ್ ಬಗ್ಗೆ ನಮ್ಮಿಬ್ಬರ ಬಗ್ಗೆ ತುಂಬಾ ವಾಗ್ಯುದ್ಧಗಳಾಗಿದ್ದವು..
 
ಭಾನುವಾರ ಬಂತು. ಬೆಳಿಗ್ಗೆ ೧೧.೩೦ ಕ್ಕೆ ಸರಿಯಾಗಿ ಅಲ್ಲಿ ಹೋದೆ..  ಹಳೆಯ ಸ್ನೇಹಿತರು ಯಾರೂ ಬಂದಿರಲಿಲ್ಲ.. (ನಂತರ ತಿಳಿಯಿತು. Heartland ನಿಂದ ಕೇವಲ ಇಬ್ಬರ್ರನ್ನು ಮಾತ್ರ ಕರೆದಿದ್ದರೆಂದು). ಎಲ್ಲರಿಗೂ ಶುಭಾಶಯ ತಿಳಿಸಿ, ಗಿಫ್ಟ್ ಕೊಟ್ಟು ನನ್ನ ಜಾಗಕ್ಕೆ ಬಂದು ಕುಳಿತೆ. ಊಟ ೧.೩೦ ಕ್ಕೆ ಎಂದು ಆಮಂತ್ರಣ ಪತ್ರಿಕೆ ಯಲ್ಲಿ ಇದ್ದಿದ್ದರಿಂದ ಅದರ ಬಗ್ಗೆ ಯೋಚನೆ ಮಾಡಲಿಲ್ಲ. ಆದರೆ ಜೊತೆಗೆ ಮಾತನಾಡಲು ಯಾರು ಇಲ್ಲದಿದ್ದರಿಂದ ಹಸಿವು ಕಾಡತೊಡಗಿತು.. ಆಗ ಮೊಬೈಲ್ ಬೇರೆ ಅಷ್ಟೊಂದು ಬಳಕೆಯಲ್ಲಿ ಇರದಿದ್ದರಿಂದ, ಅದನ್ನು ಹಿಡಿದು ಕುಳಿತರೆ ಅಷ್ಟು ಚೆನ್ನಾಗಿ ಕಾಣುವುದಿಲ್ಲವೆಂದು ಸುಮ್ಮನೆ ಕುಳಿತೆ.. ಅಲ್ಲಿ ಯಾರೂ ಪರಿಚಯ ಬೇರೆ ಇರಲಿಲ್ಲ.. ಇಷ್ಟು ಬೇಗ ಬಂದಿದ್ದು ಯಾಕೆಂದು ನನ್ನನ್ನು ನಾನೇ ಬೈದು ಕೊಳ್ಳತೊಡಗಿದೆ. ಅಂತೂ ಇಂತೂ ೧ .೩೦ ಆಯಿತು.. ಬೇಗ ಬೇಗ ಊಟ ಮುಗಿಸಿ ಮನೆಗೆ ಹೋದರಾಯಿತು ಎಂದು ಭಾವಿಸಿ, ಯಾರಾದರು ಊಟಕ್ಕೆ ಹೋಗಿ ಅಂತ ಹೇಳುತ್ತಾರೇನೋ ಎಂದು ಕಾಯತೊಡಗಿದೆ..  

ಆಶಾ ಖುದ್ದಾಗಿ ಬಂದು ಊಟ ಮಾಡಿ ಹೋಗಿ ಎಂದು ಹೇಳುತ್ತಿದ್ದಂತೆ.. ಎದ್ದು ಊಟದ ವ್ಯವಸ್ಥೆ ಮಾಡಲಾಗಿದ್ದ ಸ್ಥಳಕ್ಕೆ ನಡೆದೆ. ಚರ್ಚ್ ನ ಹೊರಗಡೆ ಪೆಂಡಾಲ್ ಹಾಕಿ ಊಟಕ್ಕೆ ಕೂರುವ ವ್ಯವಸ್ಥೆ ಮಾಡಲಾಗಿತ್ತು.. ಒಂದು ಹತ್ತು ಜನ ಊಟಕ್ಕೆ ಕುಳಿತ ನಂತರ ನಾನು ಹೋಗಿ ಊಟಕ್ಕೆ ಕುಳಿತೆ.. ನಾನು ಕುಳಿತ saalinalli ಆ ಕಡೆ ಈ ಕಡೆ ಯಾರು ಇರಲಿಲ್ಲ. ಮೂಲತಃ ಸಸ್ಯಾಹಾರಿಯಾಗಿದ್ದ ನಾನು ಅಲ್ಲಿ ನಾನ್ ವೆಜ್ ಇರುತ್ತದೆ ಎಂದು ತಿಳಿದಿರಲ್ಲಿಲ್ಲ. ಊಟಕ್ಕೆ ಕುಳಿತ ಮೇಲೆ ನನಗೆ ಈ ಪ್ರಶ್ನೆ ಕಾಡತೊಡಗಿತು.. ಏನು ಮಾಡುವುದು ಎಂದು ತಿಳಿಯದೆ ಚಡಪಡಿಸುತ್ತಿದ್ದೆ. 

ಆಗ ಸರಿಯಾಗಿ ನನ್ನ ಎದುರಿನ ಟೇಬಲ್ನಲ್ಲಿ ಆ ಚರ್ಚ್ನ ಪಾದ್ರಿ (ಫಾದರ್) ಬಂದು ಕುಳಿತರು.. ಆಗ ನನ್ನ ಮನಸ್ಸಿಗೆ ಸ್ವಲ್ಪ ನೆಮ್ಮದಿ ಎನಿಸಿತು. ಫಾದರ್ ಹೇಗೂ ನಾನ್ ವೆಜ್ ತಿನ್ನಲ್ಲ ಅದ್ದರಿಂದ ನಾನು ಸರಿಯಾದ ಜಾಗದಲ್ಲಿ ಕುಳಿತ್ತಿದ್ದೇನೆಂದು ನನ್ನ ಬೆನ್ನು ನಾನೇ ತಟ್ಟಿಕೊಂಡೆ.


ಅವರು ಕುಳಿತಿರುವ ಸಾಲಿನಲ್ಲೇ ಹೋಗಿ ಕುಳಿತು ಕೊಳ್ಳಲೆ ಎಂದು ಯೋಚಿಸಿದೆ. ಆದರು ಕುಳಿತ್ತಿದ್ದ ಜಾಗ ಬಿಟ್ಟು ಬೇರೆ ಕಡೆ ಹೋಗುವುದು ಸರಿ ಬರುವುದಿಲ್ಲ ಎಂದು ತಿಳಿದು ಅಲ್ಲಿಯೇ ಇದ್ದೆ. ಸುಮಾರಾಗಿ ಶಾಮಿಯಾನ ತುಂಬುತ್ತಿದ್ದಂತೆ ಬಡಿಸಲು ಶುರುವಿಟ್ಟುಕೊಂಡರು. ಉಪ್ಪು, ಉಪ್ಪಿನಕಾಯಿ, ಸ್ವೀಟ್ ಎಲ್ಲ ಬಂತು.. ಇದೆಲ್ಲ ನೋಡುತ್ತಿದ್ದಂತೆ ನನ್ನ ಹಸಿವು ತಾರಕಕ್ಕೇರಿತು. ನಂತರ ಪಲಾವ್, ಗೋಬಿ ಮಂಚೂರಿಯನ್ನು ಬಡಿಸಿದರು. ಕೆಲವರು ತಿನ್ನಲು ಶುರು ಮಾಡಿದರು.. ಸರಿ ನಾನು ಫಾದರ್ ನನ್ನೇ ನೋಡುತಿದ್ದೆ. ಅವರು ತಿನ್ನಲು ಪ್ರಾರಂಭಿಸುತ್ತಿದ್ದಂತೆ ನಾನು ಸಹ ಊಟ ಮಾಡಲು ಅಣಿಯಾದೆ.

ಅಸ್ತು ಹೊತಿಗೆ ಸರಿಯಾಗಿ ಫಾದರ್ ಪಕ್ಕ ಕುಳಿತ ಒಬ್ಬರು ಬಡಿಸುವಾತನಿಗೆ ಹೇಳಿದರು; "ಫಾದರ್ ಗೆ ಬಿರಿಯಾನಿನಲ್ಲಿ ಚಿಕನ್ ಜಾಸ್ತಿ ಹಾಕಪ್ಪ" ಎಂದು.. ಹಾಗೆ ಹೇಳಿದಾಗಲೇ ನನಗೆ ಗೊತ್ತಾಗಿದ್ದು ಅದು ಪಲಾವ್, ಗೋಬಿ ಮಂಚೂರಿ ಅಲ್ಲ, ಚಿಕನ್ ಬಿರಿಯಾನಿ ಮತ್ತು ಚಿಕನ್ ಮನ್ಚುರಿಯನ್ ಎಂದು. ನಂಗೆ ವಿದ್ಯುತ್ ಶಾಕ್ ಹೊಡೆದಂತ ಅನುಭವ. ನನ್ನ ಮನಸಿನಲ್ಲಿ ನೂರಾರು ಪ್ರಶ್ನೆಗಳು.. "ಫಾದರ್ ನಾನ್ ವೆಜ್ ತಿಂತಾರ?" "ಅಹಿಂಸೆ ಬಗ್ಗೆ ಪ್ರತಿಪಾದಿಸುವ ದೇವರ ಸೇವಕರು ಇವರು.. ಇದನ್ನು ತಡೆಯುವ ಬದಲು ಅವರೇ ಇದರಲ್ಲಿ ಭಾಗಿಯಾಗುತ್ತಿದ್ದಾರ?" "ಇಲ್ಲಿಂದ ನಾನು ಹೊರ ಹೋಗುವುದಾದರೂ ಹೇಗೆ?".. "೨ ಕ್ಷಣ ತಡವಾಗಿದ್ದರೆ ತಿಂದು ಬಿಡುತ್ತಿದ್ದೆನಲ್ಲ" ಹೀಗೆ ನಾನಾ ಯೋಚನೆಗಳು.. ಫಾದರ್ ನ ನಂಬಿ ಇಲ್ಲಿ ಕುಳಿತು ತಪ್ಪು ಮಾಡಿದೆ ಎನ್ನಿಸಿತು.. ಫಾದರ್ ನನಗೆ ಗಾಡ್ ಫಾದರ್ ರೀತಿ ಕಾಣಿಸತೊಡಗಿದರು. 

ಇಲ್ಲಿಂದ ತಪ್ಪಿಸಿ ಕೊಂಡು ಹೋಗುವ ಬಗೆ ಹೇಗೆ ಎಂದು ಯೋಚಿಸತೊಡಗಿದೆ.. ಆಗ ಸಹಾಯಕ್ಕೆ ಬಂತು ಮೊಬೈಲ್. ಸುಮ್ಮನೆ ಕಾಲ್ ಬಂದವರಂತೆ ನಟಿಸುತ್ತ, ಯಾರ ಬಳಿಯೋ ಮಾತಾಡುತ್ತಿರುವಂತೆ ಶಾಮಿಯಾನದ ಹೊರಗೆ ಬಂದೆ. ಮೊಬೈಲ್ಗೆ ಮನಸಿನಲ್ಲೇ ಥ್ಯಾಂಕ್ಸ್ ಹೇಳುತ್ತಾ ಈ ಅನುಭವದಿಂದಲೇ ಹೊಟ್ಟೆ ತುಂಬಿಸಿಕೊಂಡು ಇಲ್ಲಿ ಊಟವೇ ಬೇಡ ಅಂದುಕೊಂಡು ಹೊರ ನಡೆಯುವಾಗ, ಅಲ್ಲೇ ಶಾಮಿಯಾನದ ಹಿಂಭಾಗದಲ್ಲಿದ್ದ ವೆಜ್ ಊಟದ ಸಾಲು ನನ್ನನ್ನು ಅಣಕಿಸುತ್ತಿತ್ತು.

Sunday, August 14, 2011

Sunday Bazaar !!!!

ಬಹು ಸಮಯದಿಂದ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಸಂಡೇ ಬಜಾರ್ ಕುರಿತಾದ ನನ್ನ ಕುತೂಹಲಕ್ಕೆ ತೆರೆ ಬಿದ್ದಿದ್ದು ನಾನು 8 ನೇ ತರಗತಿಯಲ್ಲಿದ್ದಾಗ.. 

ಬೆಂಗಳೂರಿನ ಪುರಾತನ ಬೀದಿಗಳಲ್ಲಿ ಒಂದಾದ ಬಿ ವಿ ಕೆ ಅಯ್ಯಂಗಾರ್ ರಸ್ತೆ ಯಲ್ಲಿ ಪ್ರತಿ ಭಾನುವಾರ ನಡೆಯುವ ಈ ಸಂಡೇ ಬಜಾರ್, ಚೋರ್ ಬಜಾರ್ ಎಂದೂ ಸಹ ಪ್ರಖ್ಯಾತ.. ಇಲ್ಲಿ ಸಿಗುವ ಬಹುತೇಕ ಸಾಮಾನುಗಳು ಕದ್ದ ಮಾಲುಗಳೇ. ಈ ರಸ್ತೆಯ ಒಂದು ತುದಿ ಅವೆನ್ಯೂ ರೋಡಿನೆಡೆಗೆ ಸಾಗಿದರೆ, ಇನ್ನೊಂದು ತುದಿ ಕೆ ಆರ್ ಮಾರ್ಕೆಟ್ ಗೆ ಸೇರುತ್ತದೆ. ಇಲ್ಲಿ ಏನಿದೆ ಏನಿಲ್ಲ ಎನ್ನುವ ಹಾಗಿಲ್ಲ. ಇಲ್ಲಿ ಎಲ್ಲವೂ ಸಿಗುತ್ತದೆ .. ಪ್ರಖ್ಯಾತ ಕಂಪನಿಯ ಎಲೆಕ್ಟ್ರೋನಿಕ್ ಉಪಕರಣದಿಂದ, ಬಟ್ಟೆ-ಬರೆ (?), ಪರ್ಫ್ಯೂಮ್, ಪಾತ್ರೆ-ಪಗಡಿ, ದಿನ ನಿತ್ಯ ಬಳಸುವ ಉಪಕರಣಗಳಿಂದ ಹಿಡಿದು ಆಫೀಸಿಗೆ ಬೇಕಾಗುವ ಸರಕು ಸಮಾನುಗಳವರೆಗೆ ಎಲ್ಲ ಸಿಗುತ್ತದೆ. ಅದೂ ಎಲ್ಲ ಕಡಿಮೆ ಬೆಲೆಗೆ.

ಇಲ್ಲಿ ಸಿಗುವ ಬಹುತೇಕ ಸಾಮಗ್ರಿಗಳು ಕದ್ದ ಮಾಲು. ಇಲ್ಲದೆ ಹೋದರೆ ಕಂಪನಿ ಉಪಕರಣಗಳು ಅಷ್ಟು ಕಡಿಮೆ ಬೆಲೆಯಲ್ಲಿ ಸಿಗುವ ಸಂಭವ ಕಡಿಮೆ. ಇದರಲ್ಲಿ ಪೊಲೀಸರೂ ಶಾಮೀಲಾಗಿರುತ್ತಾರೆ ಎಂಬ ಆಪಾದನೆ ಇದ್ದರೂ, ೨೦೦೮ ರಲ್ಲಿ ಸಂಡೇ ಬಜಾರ್ ಅನ್ನು ಖಾಯಂ ಆಗಿ ಸ್ಥಗಿತಗೊಳಿಸಲಾಗುವುದು ಎಂದು ಅಂದಿನ ಕಮಿಷನರ್ ಆಜ್ಞೆ ಹೊರಡಿಸಿದ್ದರು. ಆ ಸಮಯದಲ್ಲಿ ನಡೆದ ಒಂದೆರಡು ಅಪರಾಧ ಪ್ರಕರಣಗಳಲ್ಲಿ ಇಲ್ಲಿಂದ ಕೊಂಡ ಆಯುಧಗಳನ್ನು ಬಳಸಲಾಗಿತ್ತು ಎಂಬುದು ಅದರ ಹಿಂದಿದ್ದ ಆಲೋಚನೆ. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.

ಹೋದ ಭಾನುವಾರ ನನಗೆ ಈ ಸಂಡೇ ಬಜಾರ್ ಗೆ ಹೋಗುವ ಅವಕಾಶ ಸಿಕ್ಕಿತು.. ಸಾಕಷ್ಟು ಬದಲಾವಣೆಗಳಾಗಿದ್ದವು .. ಮುಂಚೆಗಿಂತ, ಅಂಗಡಿಗಳನ್ನು ಜೋಡಿಸಿಕೊಂಡಿರುವ ರೀತಿ ವ್ಯವಸ್ಥಿತವಾಗಿತ್ತು. ಆದರೆ, ಕಿಕ್ಕಿರಿದ ಸಂತೆ, ಅಲ್ಲಿ ಬಂದಿದ್ದ ಜನ, ಯಾವುದೂ ಬದಲಾಗಿರಲಿಲ್ಲ. ಅಲ್ಲಿ ಸಿಗುತಿದ್ದ ಸಾಮಾನುಗಳು ಸಹ ಅಪ್ಡೇಟ್ ಆಗಿದ್ದವು.. ಹೊಸ ಹೊಸ ಬಗೆಯ ಉಪಕರಣಗಳು ಕಾಣಸಿಗುತ್ತಿದ್ದವು, ಅದೂ ಸಹ ಕಡಿಮೆ ಬೆಲೆಯಲ್ಲಿ, ಆದರೆ ಆ ಉಪಕರಣಗಳ ಬಾಳಿಕೆ ಬಗ್ಗೆ ಮಾತ್ರ ಎಲ್ಲರಿಗೂ ಯಕ್ಷ ಪ್ರಶ್ನೆ ಕಾಡುತಿತ್ತು.. ಅಂಗಡಿಗಳಲ್ಲಿ ಸಿಗದ ಎಲ್ಲ ಉಪಕರಣಗಳ spare ಪಾರ್ಟ್ಸ್ ಸಹ ಇಲ್ಲಿ ಸಿಗುತ್ತದೆ ಅದೂ ಸಹ ನಂಬಲಾರದ ಬೆಲೆಯಲ್ಲಿ. ಎಲ್ಲ ತರಹದ ಹತಾರಗಳು ಇಲ್ಲಿ ಸಿಗುತ್ತದೆ.


ಇಲ್ಲಿನ ವ್ಯಾಪಾರ ವಹಿವಾಟುಗಳಲ್ಲಿ ಪೊಲೀಸರಿಗೂ ಮಾಮೂಲು ನೀಡಬೇಕಾಗುತ್ತದೆ ಎಂಬ ಇಲ್ಲಿನ ವ್ಯಾಪಾರಿಗಳ ಅಳಲನ್ನು ಮಿಡ್-ಡೇ ಪತ್ರಿಕೆ ವರದಿ ಮಾಡಿತ್ತು. ಅದರ ಪ್ರಕಾರ, ಒಂದು ವ್ಯಾಪಾರಿ ೨೦ ರಿಂದ ೨೦೦೦ ದ ವರೆಗೂ ಪೊಲೀಸರಿಗೆ ಲಂಚ ನೀಡುತ್ತಾರಂತೆ. ಅದು ಅವರು ಮಾರಾಟ ಮಾಡುವ ವಸ್ತು, ಜನ, ಜಾಗದ ಮೇಲೆ ನಿರ್ಧರಿತವಾಗುತ್ತದಂತೆ. ಇದರ ಪ್ರಕಾರ ಹೋದರೆ, ತಿಂಗಳಿಗೆ ಪೊಲೀಸರಿಗೆ ೨ ಲಕ್ಷದ ವರೆಗೆ ಈ "ಮಾಮೂಲು" ಸಂದಾಯವಾಗುತ್ತದಂತೆ.


ಇಷ್ಟು ದೊಡ್ಡ ಮೊತ್ತದ ವರೆಗೂ ಲಂಚ ಕೊಡುತ್ತಾರೆ ಎಂದರೆ ಇಲ್ಲಿ ನಡೆಯುವ ವಹಿವಾಟು ಎಷ್ಟಿರಬಹುದೆಂದು ನೀವೇ ಊಹಿಸಿ. ಮಾರ್ಕೆಟ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಸಂಡೇ ಬಜಾರ್ ವ್ಯಾಪಾರಿಗಳಿಗೆ ತೊಂದರೆಯಾಗಿದ್ದರು, ಅಲ್ಲಲ್ಲೇ ಜಾಗ ಹುಡುಕಿ, ಆ ಕೊಳಕು ರಸ್ತೆಗಳಲ್ಲೇ ವ್ಯಾಪಾರ ನಡೆಸುವ ಇಲ್ಲಿನ ವ್ಯಾಪಾರಿಗಳ ಧೈರ್ಯ ನಿಜಕ್ಕೂ ಪ್ರಶಂಸನೀಯ.

ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳಲ್ಲಿ ಕಾಲಿಡುವುದು ದುಸ್ಸಾಹಸವೇ ಸರಿ. ಎಲ್ಲೆಲ್ಲೂ ಕೊಚ್ಚೆ ಮೋರಿಗಳ ನೀರು ಹರಿದಾಡುತಿರುತ್ತವೆ ಮಾತು ದುರ್ನಾಥ ಮೂಗಿಗೆ ಬಡಿಯುತ್ತಿರುತ್ತದೆ. ಆದರು ವ್ಯಾಪಾರಿಗಳ, ಮಳಿಗೆಗಳ, ಸಂಖ್ಯೆ ಕಡಿಮೆ ಏನೂ ಇರುವುದಿಲ್ಲ.

ಇದೆಲ್ಲ ಓದಿದ ಮೇಲೆ, ಸಾಧ್ಯವಾದರೆ ನೀವು ಒಮ್ಮೆ ಸಂಡೇ ಬಜಾರ್ಗೆ ಭೇಟಿ ಕೊಡಿ. ಆ ಅನುಭವವೇ ಬೇರೆ. ಆದರೆ ಅಲ್ಲಿ ಹೋಗಬೇಕಿದ್ದರೆ, ನಿಮ್ಮ ಪರ್ಸು, ಚೈನು, ಉಂಗುರಗಳು ಮತ್ತು ನೀವು ಕೊಂಡಿರುವ ಸಾಮಾನುಗಳ ಬಗ್ಗೆ ಜಾಗ್ರತೆಯಿಂದಿರಿ. ಯಾಕೆಂದರೆ, ನಿಮಗೆ ಸೇರಿದ ವಸ್ತುಗಳನ್ನು ಕದ್ದು ನಿಮಗೆ ಮಾರುವ ಚಾಣಕ್ಷರು ಇಲ್ಲಿ ಬಹಳಷ್ಟು ಮಂದಿಯಿದ್ದಾರೆ.

Thursday, February 17, 2011

ಅಂತಿಮ ಯಾತ್ರೆ

ಅರ್ಧ ಜಗತನ್ನೇ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಅಲೆಕ್ಸಾ೦ಡರ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದ್ದ. ಓಡಾಡಲು ಶಕ್ತಿಯಿಲ್ಲದೆ, ಎಲ್ಲ ಕೆಲಸಗಳಿಗೂ ತನ್ನ ವೈದ್ಯ ರನ್ನೇ ಅವಲಂಬಿಸಿದ್ದ.
ಇನ್ನು ಹೆಚ್ಚು ದಿನ ಬದುಕಲಾರೆ ಎಂದು ತಿಳಿದು ತನ್ನ ಉಯಿಲನ್ನು ಬರೆಯಲು ನಿರ್ಧರಿಸಿದ..ನ್ಯಾಯಪ್ರಭುಗಳಿಗೆ ಬರ ಹೇಳಿ ಉಯಿಲನ್ನು ಸಿದ್ಧ ಪಡಿಸಲು ಹೇಳಿದ.. ಕೇವಲ ೩ ಸಾಲಿನ ಉಯಿಲಾಗಿತ್ತು ಅದು.. 
೧. ತನ್ನ ಶವಪೆಟ್ಟಿಗೆ ಯನ್ನು ತನ್ನ ೪ ಜನ ವೈದ್ಯರೇ ಹೊರಬೇಕು.
೨. ತನ್ನ ಶವಯಾತ್ರೆ ನಡೆಯುವ ದಾರಿಯೆಲ್ಲ ತಾನು ಇತರ ದೇಶಗಳಿಂದ ಕೊಳ್ಳೆ ಹೊಡೆದ ಮುತ್ತು ರತ್ನ ವಜ್ರ ವೈಡೂರ್ಯ ಗಳಿಂದ ಚೆಲ್ಲಾಡಿರಬೇಕು.
೩. ತನ್ನ ಬಲಗೈ ಅಂಗೈ ಯನ್ನು ಆಕಾಶಕ್ಕೆ ಅಭಿಮುಖವಾಗಿ ಶವದ ಪೆಟ್ಟಿಗೆ ಯಿಂದ ಹೊರಗೆ ಚಾಚಿರಬೇಕು.

ಹೀಗೆ ಬರೆಸಿದ ಉಯಿಲನ್ನು ಎಲ್ಲರೆದುರು ಓದಿ ಸಹಿ ಮಾಡಿ ಅಂಗೀಕೃತಗೊಳಿಸಿದ.

ರಾಜವೈದ್ಯರಿಗೆಲ್ಲ ಆಶ್ಚರ್ಯ ಈ ಥರದ ವಿಚಿತ್ರ ಉಯಿಲನ್ನು ನೋಡಿ.. ಆದರೆ ಯಾರಿಗೂ ಧೈರ್ಯ ಬರಲಿಲ್ಲ ಚಕ್ರವರ್ತಿಯನ್ನು ಪ್ರಶ್ನಿಸಲು.. 

ಕೊನೆಗೂ ರಾಜನಿಗೆ ಆಪ್ತನಾದ ಒಬ್ಬ ರಾಜವೈದ್ಯ ಕೇಳಿಯೇಬಿಟ್ಟ. "ಪ್ರಭು ನಿಮ್ಮನ್ನು ಪ್ರಶ್ನಿಸುತ್ತಿರುವ ಉದ್ಧಟತನಕ್ಕೆ ಕ್ಷಮಿಸಬೇಕು.. ನಿಮ್ಮ ಉಯಿಲಿನ ಗೂಡಾರ್ಥವನ್ನು ವಿವರಿಸಬೇಕಾಗಿ ವಿನಂತಿ."

ನಗುತ್ತಾ ಅಲೆಕ್ಸಾ೦ಡರ ನುಡಿದ.. 
"ಇದರಲ್ಲಿ ಗೂಡಾರ್ಥವೇನು ಇಲ್ಲ. ಇದು ಜಗತಿಗ್ಗೆ ನನ್ನ ಅನುಭವವನ್ನು ಹೇಳುವ ಪರಿ.. 
೧. ತನ್ನ ಶವಪೆಟ್ಟಿಗೆ ಯನ್ನು ತನ್ನ ೪ ಜನ ವೈದ್ಯರೇ ಹೊರಬೇಕು - ಯಾವ ವೈದ್ಯನೂ ನಿಮ್ಮನ್ನು ಸಾವಿನಿಂದ ರಕ್ಷಿಸಲಾರ. ಒಂದಲ್ಲ ಒಂದು ದಿನ ಎಲ್ಲರೂ ಹೋಗಲೇಬೇಕು.. 
೨. ತನ್ನ ಶವಯಾತ್ರೆ ನಡೆಯುವ ದಾರಿಯೆಲ್ಲ ತಾನು ಇತರ ದೇಶಗಳಿಂದ ಕೊಳ್ಳೆ ಹೊಡೆದ ಮುತ್ತು ರತ್ನ ವಜ್ರ ವೈಡೂರ್ಯ ಗಳಿಂದ ಚೆಲ್ಲಾಡಿರಬೇಕು. - ಸಂಪಾದಿಸಿದ ಐಶ್ವರ್ಯವೂ ನಿಮ್ಮನ್ನು ಸಾವಿನಿಂದ ಕಾಪಡಲಾರದು.
೩. ತನ್ನ ಬಲಗೈ ಅಂಗೈ ಯನ್ನು ಆಕಾಶಕ್ಕೆ ಅಭಿಮುಖವಾಗಿ ಶವದ ಪೆಟ್ಟಿಗೆ ಯಿಂದ ಹೊರಗೆ ಚಾಚಿರಬೇಕು. - ಇಷ್ಟೆಲ್ಲಾ ದೇಶಗಳನ್ನು ಕೊಳ್ಳೆ ಹೊಡೆದಿದ್ದರೂ, ಇಷ್ಟೆಲ್ಲಾ ಸಂಪತ್ತು ಹೊಂದಿದದ್ದರು ಕೊನೆಗೆ ಮಣ್ಣಾಗುವ ಸಮಯದಲ್ಲಿ ಅಲೆಕ್ಸಾ೦ಡರನೂ ಖಾಲಿ ಕೈನಲ್ಲೇ ಸಾಯಬೇಕಾಯಿತು ಎಂದು ಲೋಕಕ್ಕೆ ತಿಳಿಯಲಿ ಎಂದು ಹೀಗೆ ಬರೆಸಿರುವುದಾಗಿ ಹೇಳಿ ತನ್ನ ಕೊನೆ ಉಸಿರನ್ನು ಎಳೆದನು ಅಲೆಕ್ಸಾ೦ಡರ ಚಕ್ರವರ್ತಿ.. 

ಕೊಡುವುದರಲ್ಲಿ ಇರುವ ಸುಖ ತೆಗೆದುಕೊಳ್ಳುವುದರಲ್ಲಿ ಇರುವುದಿಲ್ಲ..ಇದುವರೆಗೂ ಇತಿಹಾಸದಲ್ಲಿ ಪ್ರಖ್ಯಾತರಾಗಿರುವ ಎಲ್ಲ ಮಹನೀಯರು ತಾವು ಮಾಡಿದ ಕೊಡುವಿಕೆ ಯಿಂದಲೇ ಪ್ರಸಿದ್ಧರಾಗಿದ್ದಾರೆ.. ಅದು ಹಣ ಆಗಿರಬಹುದು, ಜ್ಞಾನ ಆಗಿರಬಹುದು, ವಿದ್ಯೆ ಆಗಿರಬಹುದು, ತಮ್ಮ ಕುಶಲತೆ ಆಗಿರಬಹುದು ಅಥವ ಏನೆ ಆಗಿರಬಹುದು.. ಇರುವ ಕೆಲವೇ ವರ್ಷಗಳಲ್ಲಿ ಎಲ್ಲರನ್ನು ಖುಷಿಯಾಗಿಡುವ ಸಣ್ಣ ಪ್ರಯತ್ನ ನಿಮ್ಮದಾಗಲಿ.. ಅದೇ ನೀವು ಮಾಡಿ ಹೋಗುವ ದೊಡ್ಡ ಆಸ್ತಿ..

 

Wednesday, February 2, 2011

Is your password strong enough??

Ramya was about to leave office after finishing her work. She got a call from her husband Karthik,

RAMYA: "Hello, yes Karthi".
KARTHIK: "Ramya, can you open my gmail and get a print out of the mail from that US consultant I forgot to take it in my office"
RAMYA: "Yes, I can, I need your password"
KARTHIK: "jeni22091980"
RAMYA: "Ok fine"

She takes the print out and logs out. Some thought struck her mind now.
JENI happens to be his college mate. Hmmm...

She decides not to discuss this with Karthik. She simply opens her mail box and changes the password from "shiva143" to "karthikramya" and leaves for home!

MORAL OF THE STORY: Change your password! After marriage!!!

Tuesday, January 4, 2011

ಪುಟ್ಟ ಪುಟ್ಟಿ ಸ್ಟೋರಿ

ಪುಟ್ಟಿ ತುಂಬಾ ಖುಷಿಯಾಗಿದ್ದಳು ಆ ದಿವಸ.. ಕಾರಣ.. ಪ್ರಥಮ ಬಾರಿಗೆ ಅವಳ ಇಂಟರ್ನೆಟ್ ಗೆಳೆಯ ಅವಳೂರಿಗೆ ಬರುವವನಿದ್ದ.. ಅವನನ್ನು ಕಾಣುವ ತವಕ ಒಂದೆಡೆ.. ಅವನಿಗೇನಾದರೂ ಕಾಣಿಕೆ ಕೊಡಬೇಕೆನ್ನುವ ತವಕ ಮತ್ತೊಂದೆಡೆ..
ಅವಳ ಬಳಿ ದುಡ್ಡಾದರೂ ಇದೆಯಾ.. ?? ಅದೂ ಇಲ್ಲ.. ಯಾರನ್ನು ಕೇಳಲಿ?? ಏನು ಮಾಡಲಿ.. ಅದೇ ಚಿಂತೆ.. ಜೊತೆಗೆ ಅಮ್ಮಮತ್ತು ತಂಗಿಯ ಕಾಟ ಬೇರೆ.. "ಯಾಕೆ ಡಲ್ ಆಗಿದಿಯ" ಅಂತ..

ಎಲ್ಲರೂ ಮಲಗಿದೊಡನೆ ತನ್ನ ಸೇವಿಂಗ್s ಹುಂಡಿಯನ್ನೊಮ್ಮೆ ತೆಗೆದು ನೋಡುತ್ತಾಳೆ, ಬರಿ ೨೩೮ ರೂಪಾಯಿಗಳು ಮಾತ್ರ ಇದೆ.. ಯಾರಿಗೂ ಹೇಳದೆ.. ಎಲ್ಲ ತೆಗೆದುಕೊಂಡು ಬೆಳಿಗ್ಗೆ ಆಫೀಸಿಗೆ ಹೊರಡುತ್ತಾಳೆ. ತನ್ನ ಬಾಸ್ ಗೆ ಕರೆ ಮಾಡಿ ಮನೆಯಲ್ಲಿ ನೆಂಟರು ಬಂದಿದ್ದಾರೆ, ಸ್ವಲ್ಪ ತಡ ಆಗುತ್ತದೆ ಎಂದು ಹೇಳಿ.. ವಾಚ್ ಶಾಪ್ ಗೆ ಲಗ್ಗೆ ಇಡುತ್ತಾಳೆ.

ಅಲ್ಲಿ ಎಲ್ಲ ವಾಚ್ ಗಳು ೩೦೦ ರೂಪಾಯಿಗಳ ಮೇಲೆ ಇತ್ತು.. ಬೇಜಾರಿನಿಂದ ವಾಪಸ್ ಆಫೀಸ್ ಗೆ ಬಂದು.. ತನ್ನ ಕೊಲೀಗ್ ಸುಂದರಿಗೆ ವಿಷಯ ಹೇಳಿ ಗಳಗಳ ನೆ ಒಂದೇ ಸಮ ಅಳತೊಡಗಿದಳು.. ವಿಷಯ ತಿಳಿದ ಸುಂದರಿ ಸಂಜೆ ಒಟ್ಟಿಗೆ ವಾಚ್ ಶಾಪ್ ಗೆ ಹೋಗೋಣ ಎಂದು ಸಂತೈಸಿ ಪುಟ್ಟಿ ಯನ್ನು ಸುಮ್ಮನಾಗಿಸುತ್ತಾಳೆ..
ಸಂಜೆ ವಾಚ್ ಶಾಪ್ ನಲ್ಲಿ ತನ್ನ ದೊಡ್ಡ ಗಂಟಲಿನಿಂದ ಫೇಮಸ್ ಆಗಿದ್ದ ಸುಂದರಿ.. ಅಂಗಡಿ ಯವನೊಂದಿಗೆ ಬಾರಿ ಚೌಕಾಶಿ ಮಾಡಿ ವಾಚನ್ನು ೨೫೦ ರೂಪಾಯಿಗೆ ಕೊಡಿಸುವಲ್ಲಿ ಯಶಸ್ವಿಯಾದಳು.. ಬಾಕಿ ಹಣವನ್ನು ಸಹ ಕೊಟ್ಟು ಉದಾರತೆ ಮೆರೆದಳು..
ಕುಶಿಯಲ್ಲಿ ಮುಳುಗಿದ್ದ ಪುಟ್ಟಿ ತಕ್ಷಣವೇ ಅದನ್ನು ಪ್ಯಾಕ್ ಮಾಡಿಸಿ ಮನೆಗೆ ಮರಳಿದಳು.. ಅವಳ ಸಂತಸ ಮನೆಯಲ್ಲಿ ಎಲ್ಲರಿಗೂ ಆಶ್ಚರ್ಯವುಂಟು ಮಾಡಿತ್ತು.. ಆದರೆ ಸಂತಸದ ಗುಟ್ಟು ಬಯಲು ಮಾಡುವ ಸ್ಥಿತಿಯಲ್ಲಿ ಪುಟ್ಟಿ ಇರಲಿಲ್ಲ..

ರಾತ್ರಿ ಎಲ್ಲರೂ ಮಲಗಿದ ನಂತರ... ತನ್ನ ಗೆಳೆಯನ ವಾಚನ್ನೊಮ್ಮೆ ನೋಡುವ ಮನಸಾಗಿ.. ಬಾಕ್ಸ್ನಿಂದ ಓಪನ್ ಮಡಿ ನೋಡುತ್ತಾಳೆ.. ಹೃದಯ ಬಾಯಿಗೆ ಬರುವುದೊಂದೇ ಬಾಕಿ.. ಗಡಿಯಾರ ನಿಂತು ಹೋಗಿದೆ.. !!!! ಬ್ಯಾಗ್ ನಲ್ಲಿದ್ದ ನೀರಿನ ಬಾಟಲಿ ಹೇಗೋ ತೆರೆದು ನೀರೆಲ್ಲ ಚೆಲ್ಲಿ ಗಡಿಯಾರ ಕ್ಕೆ ಸ್ನಾನ ಆಗಿದೆ..

ಮೊದಲೇ ಹೆದರುಪುಕ್ಕಲಿ.. ಹೇಗಪ್ಪ ಮತ್ತೆ ಅಂಗಡಿಯವನ ಬಳಿ ಹೋಗಲಿ ಎಂದು ಚಿಂತೆ.. ಮೊದಲೇ ಚೌಕಾಶಿ ಮಾಡಿರೋ ಬಗ್ಗೆ ಆತನಿಗೆ ಸಿಟ್ಟು ಬಂದಿರುತದೆ..ಈ ಸುಂದರಿ ಬೇರೆ ಜೋರಾಗಿ ಮಾತಾಡಿ ಜಗಳ ಮಾಡಿ ಬೆಲೆ ಕಮ್ಮಿ ಮಾಡಿಸಿದ್ದಾಳೆ.. ಇವಳ ಬಾಯಿ ಜೋರು... ಛೆ ಸಮಾಧಾನವಾಗಿ ಮಾತಾಡಿದ್ದರೆ ಇವಳ ಗಂಟು ಏನು ಮುಳುಗುತ್ತಿತು ಅಂತ ಬೈದು ಕೊಳ್ಳತೊಡಗಿದಳು.

ಬೆಳ್ಳಿಗ್ಗೆ ಆಫೀಸ್ ನಲ್ಲಿ ಕೆಲಸ ಜಾಸ್ತಿ ಎಂದು ಸುಳ್ಳು ಹೇಳಿ ಮನೆಯಿಂದ ಬೇಗ ಹೊರಟಳು.. ಸೀದಾ ವಾಚ್ ಅಂಗಡಿಗೆ ಹೋಗಿ ವಿಚಾರಿಸಿದಾಗ ತಿಳಿಯಿತು ಅದರ ಸೆಲ್ ಚೇಂಜ್ ಮಾಡಿದರೆ ಸರಿ ಹೋಗುತ್ತೆ ಅಂತ.. ಅದಕ್ಕೆ ಬರಿ ೩೦ ರುಪಾಯಿ ಎಂದು ವ್ಯಂಗ್ಯವಾಗಿ ನಕ್ಕ ಅಂಗಡಿಯವನ ಮುಖ ನೋಡಿ ಪುಟ್ಟಿ ನೊಂದುಕೊಂಡಳು.

ಏನು ಮಾಡುವುದೆಂದು ತೋಚುತಿಲ್ಲ.. ಆಫೀಸ್ನ ಸಮಯ ಬೇರೆ ಮೀರುತ್ತಿದೆ.. ಸಮಯ ನೋಡಿಕೊಂಡಳು.. ಇನ್ನು ಕೇವಲ ೫ ನಿಮಿಷ ಇದೆ. ಸಂಜೆ ಆಫೀಸಿಗೆ ಗೆಳೆಯನನ್ನು ಬರ ಹೇಳಿದ್ದಾಳೆ. ತಕ್ಷಣವೇ ಒಂದು ಯೋಚನೆ ಬಂತು.. ಅಪ್ಪ ಪ್ರೀತಿಯಿಂದ ಕೊಡಿಸಿದ್ದ ವಾಚನ್ನು ಬಿಚ್ಚಿ ಅಂಗಡಿಯವನ ಎದುರು ಹಿಡಿದಳು... ಇದರ ಸೆಲ್ ಆಗುತ ನೋಡಿ ಅಂತ.. ಪುಟ್ಟಿ ಯನ್ನೇ ದಿಟ್ಟಿಸಿ.. ಚೆಕ್ ಮಾಡಿ ನೋಡಿ "ಆಗುತ್ತೆ" ಅಂದ.. ತಕ್ಷಣವೇ ಅದನ್ನು ಹೊಸ ವಾಚ್ಗೆ ಹಾಕಲು ಹೇಳಿ ಮನಸಲ್ಲೇ ಆನಂದ ಪಟ್ಟಳು.. ಆ ವಾಚನ್ನು ಅವಳ ಅಪ್ಪ ಪ್ರೀತಿಯಿಂದ ಪಿ ಯು ಸಿ ಪಾಸ್ ಆದಾಗ ಕೊಡಿಸಿದ್ದರು. ಇವಳು ಅದನ್ನು ಬಹಳ ಜೋಪಾನ ಮಾಡಿ ನೋಡಿಕೊಂಡಿದ್ದಳು.. ಆದರೆ ತನ್ನ ಪ್ರೀತಿಯ ಗೆಳೆಯ ಪುಟ್ಟ ನಿಗೊಸ್ಕರ ಅ ವಾಚ್ ನ ಕಥೆ ಮುಗಿಸಿದ್ದಳು..

ಕುಶಿಯಿಂದ ಆಫೀಸ್ ಗೆ ಹೋದ ಪುಟ್ಟಿ ಗೆ ಮೇಲ್ ಬಂದಿತ್ತು.. ಪುಟ್ಟ ಬರುತಿಲ್ಲ.. ಬರುವುದೂ ಇಲ್ಲ.. !!!!
ಇಷ್ಟು ದಿನ ಅವಳು ಇಂಟರ್ ನೆಟ್ ನಲ್ಲಿ ಚಾಟ್ ಮಾಡುತ್ತ ಇದ್ದದ್ದು ಪುಟ್ಟ ನ ಜೊತೆ ಅಲ್ಲ.. ಅದು ಅವಳ ಹಳೆ ಕಾಲೇಜ್ ನ ಗೆಳತಿ (ವೈರಿ) ದಿವ್ಯ ನಡೆಸಿದ ಪ್ರಾಕ್ಟಿಕಲ್ ಜೋಕ್ ಎಂದು.. !!!!!!