Friday, September 2, 2011

ಕನ್ನಡ ಗಂಗೆಯಲಿ ಮೀಯುವೆ ನಾನೀಗ..

ನಮಸ್ಕಾರ ಗೆಳೆಯರೇ..
ಗಣೇಶ ನೀರಲ್ಲಿ ಮುಳುಗಿ, ಜನವರಿಯಲ್ಲಿ ಅಣ್ಣಮ್ಮ ಬರೋದ್ರೊಳಗೆ ನವೆಂಬರ್ ಮಧ್ಯೆ ಬರ್ತಾ ಇದೆ.. ಕನ್ನಡಮ್ಮನ ಸೇವೆ ಮಾಡಲು ಎಷ್ಟೆಷ್ಟೋ ತರಹದ ಪ್ರಯತ್ನ ಮಾಡುವವರಿದ್ದಾರೆ. ಕೆಲವರದು ಪ್ರಾಮಾಣಿಕ ಪ್ರಯತ್ನವಾದರೆ, ಕೆಲವರದು ಬರಿ ತೋರಿಕೆಯ ಕನ್ನಡ ಪ್ರೇಮ.. ಇಂಥಹವರ ಮಧ್ಯೆ ನನ್ನ ಸ್ನೇಹಿತರಾದ ಡಾ| ಪ್ರಶಾಂತ್ ವಿಭಿನ್ನ ರೀತಿಯ ಕನ್ನಡ ಸೇವೆ ಮಾಡಲು ತಯಾರಾಗುತ್ತಿದ್ದಾರೆ. ಕಹಳೆ ಎಂಬ ಕನ್ನಡ ಅಂತರ್ಜಾಲ ತಾಣವೊಂದನ್ನು ತಯಾರಿಸಿದ್ದಾರೆ.
ಬಹಳ ದಿನಗಳಿಂದ ನಾವಿಬ್ಬರೂ ಇದರ ಬಗ್ಗೆ ಚರ್ಚೆ ನಡೆಸಿ, ಈಗ ಅದನ್ನು ಕಾರ್ಯರೂಪಕ್ಕೆ ತರಲು ಅಣಿಯಾಗಿದ್ದೇವೆ. ಕನ್ನಡದ ಬಗ್ಗೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಅಂತರ್ಜಾಲ ತಾಣಗಳಿವೆ ಮತ್ತು ಗೂಗಲ್ ಕೂಡಾ ಕೆಲವೊಮ್ಮೆ ಕನ್ನಡದ ಬಗ್ಗೆ ಏನಾದರೂ ಹುಡುಕಾಟ ನಡೆಸಿದರೆ ಉತ್ತರ ನೀಡದೆ ಬೆಪ್ಪನಾಗುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡಕ್ಕೆ ಏನಾದರೂ ನೀಡಬೇಕು.. ಅಂತರ್ಜಾಲದಲ್ಲಿ ಕನ್ನಡದ ಕೊರತೆ ನೀಗಿಸಬೇಕು ಎಂಬುದು ನಮ್ಮ ಪುಟ್ಟ ಪ್ರಯತ್ನ.

ಪ್ರತಿ ವರ್ಷದ ನವೆಂಬರ್ ತಿಂಗಳಲ್ಲಿ ಪ್ರತಿ ದಿನ ಒಂದೊಂದು ಲೇಖಕರಿಂದ ನಾಡು ನುಡಿ ಸಂಸ್ಕೃತಿ ಕುರಿತಾದ ಬರವಣಿಗೆಯನ್ನೂ ಕಹಳೆ ಯಲ್ಲಿ ಮುದ್ರಿಸಲಾಗುವುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ತುಂಬಾ ಆಗತ್ಯ. ನೀವು ಲೇಖನಗಳನ್ನು ಬರೆಯಬೇಕು ಎಂದೇನಿಲ್ಲ. ಅಲ್ಲಿ ಬಿತ್ತರಿಸಲಾಗುವ ಲೇಖನಗಳಿಗೆ ನಿಮ್ಮ ಕಾಮೆಂಟ್ಸ್ಗಳಿಂದ ಪ್ರೋತ್ಸಾಹ ನೀಡಿದರೆ, ಲೇಖಕನಿಗೆ ಅಂತಹ ಹತ್ತು ಹಲವಾರು ಲೇಖನ ಬರೆಯುವ ಹುಮ್ಮಸ್ಸು, ಉತ್ಸಾಹ ಬರುತ್ತದೆ.. ಇದನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ, ಅವರಲ್ಲಿ ಯಾರಿಗಾದರೂ ಇದರ ಬಗ್ಗೆ ಆಸಕ್ತಿ ಇದ್ದು ಅವರು ಕಹಳೆಗೆ ತಮ್ಮ ಕೊದುಗೆಯನ್ನು ನೀಡಿದರೆ ಅದೂ ಸಹ ಕನ್ನಡಕ್ಕೆ ನೀವು ಮಾಡುವ ಸೇವೆ.
ಗಣೇಶ ಹಬ್ಬದ ಶುಭದಿನದಂದು, ವಿಘ್ನನಿವಾರಕನ ಆಶೀರ್ವಾದಗಳೊಂದಿಗೆ ಹಾಗೂ ನಿಮ್ಮೆಲ್ಲರ ಪ್ರೀತಿಪೂರ್ವಕ ಮತ್ತು ಉತ್ಸಾಹದಾಯಕ ಪ್ರೋತ್ಸಾಹದ ನಿರೀಕ್ಷೆಯೊಂದಿಗೆ ಕಹಳೆಯನ್ನು ಕನ್ನಡಿಗರಿಗೆ ಸಮರ್ಪಿಸಿದ್ದೇವೆ; ನಾವೆಲ್ಲರೂ ಇದನ್ನು ಉಳಿಸಿ ಬೆಳೆಸೋಣ.
ಕಹಳೆಗೆ ಇಂದೇ ಭೇಟಿ ಕೊಡಿ ಮತ್ತು ಅಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಏನಾದರೂ ಕೊಡುಗೆ ನೀಡಿ ಎಂದು ನನ್ನ ಸವಿನಯ ಪ್ರಾರ್ಥನೆ.

ಗಣೇಶ ಬಂದ.. ಏನೇನ್ ತಂದ?

ಮೊದಲಿಗೆ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ಗಣೇಶ ತನ್ನ ಹಾಸ್ಯಭರಿತ ಕಥೆಗಳಿಂದ, ತನ್ನ ಹೊಟ್ಟೆಬಾಕತನದಿಂದ, ತನ್ನ ಬುದ್ಧಿವಂತಿಕೆಯಿಂದ ಎಲ್ಲರಿಗೂ ಪ್ರಿಯವಾದ ದೇವರು. ಹೇಗೆ ಜನ ಏನಾದರು ಮಾಡುವಾಗ ತನ್ನ ಪ್ರೀತಿಪಾತ್ರರನ್ನು ನೆನೆಸಿಕೊಳ್ಳುತ್ತಾರೋ, ಹಾಗೆ ಪ್ರತಿಯೊಂದು ಶುಭ ಕಾರ್ಯಕ್ರಮಗಳಲ್ಲೂ ಗಣೇಶನಿಗೆ ಪ್ರಥಮ ಆದ್ಯತೆ. ಗಣೇಶನ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಇಂದಿಗೂ ಸಹ ಭಾರತದಲ್ಲಿ ಎಲ್ಲ ಜಾತಿ ಮತಗಳವರೂ ಆರಾಧಿಸುವ ದೇವರು ಗಣೇಶ. ಪ್ರತಿ ರಸ್ತೆರಸ್ತೆ ಗಳಲ್ಲೂ ಗಣೇಶೋವಿದೇಶಗಳಲ್ಲೂ ಗಣೇಶನ ಆರಾಧಕರಿದ್ದಾರೆ, ದೇವಾಲಯಗಳಿವೆ. ಹೀಗೆ ಪ್ರತಿಯೊಂದು ಕಾರ್ಯಕ್ಕೂ, ಗಣೇಶ ಬೇಕೇ ಬೇಕ್ ಕಣೋ.. J

ಗಣೇಶನನ್ನು ಇಷ್ಟ ಪಡದೆ ಇರುವವರಿಲ್ಲ. ತನ್ನ ಗಾತ್ರದಿಂದ, ವಿಚಿತ್ರವಾದ ಆಕರದಿಂದ ಎಲ್ಲರ ಗಮನ ಸೆಳೆಯುತ್ತಾನೆ. ಮಕ್ಕಳಿಗಂತೂ ಗಣೇಶ ಎಂದರೆ ಪ್ರಾಣ ಏಕೆಂದರೆ ಆತನ ಕಥೆಗಳೆಲ್ಲವೂ ವೈವಿಧ್ಯತೆಯಿಂದ ಕೂಡಿರುತ್ತದೆ. ತನ್ನ ಹಲ್ಲನ್ನೇ ಮುರಿದುಕೊಂಡು ವೇದವ್ಯಾಸರಿಗಾಗಿ ಮಹಾಭಾರತ ಬರೆದಿದ್ದಿರಬಹುದು, ತಂದೆ ತಾಯಿಗೆ ಮೂರು ಸುತ್ತು ಬಂದು ವಿಶ್ವ ಪರ್ಯಟನೆ ಮುಗಿಸಿದ್ದಿರಬಹುದು, ಹೊಟ್ಟೆ ಒಡೆದು ಚಂದ್ರ ನಕ್ಕಾಗ ಹಾವನ್ನೇ ಹೊಟ್ಟೆಗೆ ಸುತ್ತಿಕೊಂಡಿದ್ದಿರಬಹುದು, ಕುಬೇರನ ಗರ್ವಭಂಗ ಮಾಡಿದ್ದಿರಬಹುದು, ಹಲವು ರಕ್ಕಸರ ಅಂತ್ಯ ಕಾಣಿಸಿದ್ದಿರಬಹುದು, ಅಥವ ಗಣೇಶನ ಜನನದ ಕಥೆಯೂ ಇರಬಹುದು.. ಇದೆಲ್ಲವೂ ಮಕ್ಕಳಲ್ಲಿ ಬಹು ಪ್ರಸಿದ್ಧ.
ಇಂತಹುದೇ ಒಂದು ಕಥೆಯನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಗಣೇಶ ತಾರುಣ್ಯದ ಹೊಸ್ತಿಲಲ್ಲಿ ಇದ್ದಾಗ ಎಲ್ಲ ದೇವತೆಗಳು ಗಣೇಶನನ್ನು ಪೀಡಿಸತೊಡಗಿದರು.. ಗಣೇಶ ನಿನ್ನ ಮದುವೆ ಯಾವಗಪ್ಪ ಅಂತ. ಗಣೇಶ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದೆ ತನ್ನ ತಾಯಿಯ ಬಳಿ ಬಂದು ಕೇಳುತ್ತಾನೆ ಅಮ್ಮ ನಂಗು ಮದುವೆ ಮಾಡಮ್ಮ ಆ ತಾಯಿಯ ಚಿಂತೆಯೇ ಬೇರೆ. ಈ ವಿಚಿತ್ರ ಆಕಾರದ ಮಗನಿಗೆ ಹುಡುಗಿ ಎಲ್ಲಿಂದ ತರುವುದಪ್ಪ ಎಂದು.. ತಕ್ಷಣಕ್ಕೆ ತಪ್ಪಿಸಿಕೊಳ್ಳಲು ನಾಳೆ ಬಾ ಎಂದು ಹೇಳುತ್ತಾಳೆ. ಮರುದಿನ ಗಣೇಶ ಬಂದು ಕೇಳಿದ..ಅಮ್ಮ ಯಾವಾಗಮ್ಮ ನನ್ನ ಮದುವೆ? ನಾನು ಹೇಳಿದ್ದು ಇವತ್ತಲ್ಲ.. ನಾಳೆ ಬಾ ಹೀಗೆ ಪ್ರತಿದಿನವು ಪಾರ್ವತಿ ನಾಳೆ ಬಾ ಎಂದು ಹೇಳಿ ಅವನನ್ನು ಸಾಗಹಾಕತ್ತಿರುತ್ತಾನೆ.
ಹೀಗೆ ನಡೆಯುತ್ತಿರುವಾಗ, ಒಮ್ಮೆ ಶನಿ ದೇವರು ಬಂದು, ನಿನಗೆ ಇಂದಿನಿಂದ ೭-೧/೨ ವರ್ಷಗಳ ಕಾಲ ಶನಿ ಕಾಟ ಇದೆ. ನಾನು ನಿನ್ನನ್ನು ಹಿಡಿದುಕೊಳ್ಳಲು ಬಂದಿದ್ದೇನೆ ಎಂದಾಗ, ಗಣೇಶ ತನ್ನ ತಾಯಿಯ ಮಾರ್ಗ ಅನುಸರಿಸುತ್ತಾನೆ. ನಾಳೆ ಬಾ. ಹೀಗೆ ಪ್ರತಿ ದಿನ ಶನಿದೇವ ಬಂದಾಗಲೆಲ್ಲ.. ನಾಳೆ ಬಾ.. ನಾಳೆ ಬಾ ಎಂದು ಸಾಗ ಹಾಕುತ್ತಿರುತ್ತಾನೆ. ಹೀಗೆ ಶನಿ ಕಾಟ ಇಲ್ಲದ ಏಕೈಕ ದೇವರು ಗಣೇಶ.
ಇಂತಿಪ್ಪ ನಮ್ಮ ಗಣೇಶ ಈ ಬಾರಿ ಭೂಮಿಗೆ ಬಂದಾಗ ಅವನ ಅವಸ್ಥೆ ಹೇಳ ತೀರದು.. ಆಜನ್ಮ ಬ್ರಹ್ಮಚಾರಿ ಯಾದ ಗಣೇಶನ ಮೇಲೆ ಬದ್ನಾಮ್ ಮುನ್ನಿಯ ಕಣ್ಣು ಬಿದ್ದಿದೆ, ಶೀಲ ತನ್ನ ಜವಾನಿಯ ಸೆರಗು ಹಾಸಿ ಗಣೇಶನ ಮನಸನ್ನು ಕೆಣಕುತ್ತಿದ್ದಾಳೆ. ರಸ್ತೆ ರಸ್ತೆಗಳಲ್ಲಿ ಹಿರಿಯರಿಗೆ ತೊಂದರೆ ಉಂಟು ಮಾಡಿಯಾದರೂ, ಗಣೇಶ ಕೇಳದಿದ್ದರೂ, ಗಣೇಶೋತ್ಸವ ವಿಜ್ರಂಭಣೆಯಿಂದ ಸಾಗಿದೆ..
ಗಣೇಶನಿಗೂ ಅಣ್ಣ ಹಜಾರೆಯವರ ಟೋಪಿ ತೊಡಿಸಲಾಗಿದೆ.. ಒಸಮ ಬಿನ್ ಲಾಡೆನ್ ನ ಭಯ ಇಲ್ಲದಿದ್ದರೂ, ಕಚಡ ರಾಜಕಾರಿಣಿಗಳು ಎಲ್ಲಿ ತನನ್ನು ತಮ್ಮ ಪಕ್ಷಕ್ಕೆ ಸೇರಿಸ್ಕೊಂಡು ತನ್ನನ್ನು ಭ್ರಷ್ಟನನ್ನಾಗಿ ಮಾಡಿಬಿಡುತ್ತಾರೆಂಬ ಭಯ ಇದ್ದೆ ಇದೆ. ಚೌತಿಯ ದಿನ ಚಂದ್ರನನ್ನು ನೋಡಿ ತಮ್ಮ ಮೇಲೆ ಬಂದಿರುವ ಅಪಾದನೆಯನ್ನು ನನ್ನ ಶಾಪದ ಮೇಲೆ ಹಾಕಿ ತಪ್ಪಿಸಿಕೊಳ್ಳುವ ದುಷ್ಟ ಜನರಿಂದ ಹೇಗಪ್ಪ ಪಾರಾಗುವುದು ಎಂಬ ಆತಂಕ ಗಣೇಶನದು. ರಂಜಾನ್ ಕೂಡಾ ಜೊತೆಗೆ ಬಂದಿದ್ದರಿಂದ ಎಲ್ಲ ರಸ್ತೆ ಗಳು ಖಾಲಿ ಖಾಲಿ.., ಮುಸ್ಲಿಮರ ಏರಿಯ ಗಳಲ್ಲಿ ಯಾ ಅಲಿ ಯಾ ಅಲಿ..  ಹಿಂದೂಗಳ ಏರಿಯದಲ್ಲಿ ಹಬ್ಬದೂಟ ಎಲ್ಲರ ಬಾಯಲ್ಲಿ..
ಗಣೇಶ ನಿಮ್ಮಲ್ಲೆರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತ, ಗಣೇಶ ಸೇಫ್ ಆಗಿ ಕೈಲಾಸಕ್ಕೆ ಹೋಗಲಿ ಎಂದು ಆಶಿಸುತ್ತೇನೆ.