Monday, November 21, 2011

ಅಣ್ಣಾ ಬಾಂಡ್ !!!

ಅಣ್ಣಾ ಬಾಂಡ್ ಎಂದರೆ ಒಂದು ಬ್ರಾಂಡ್.. ಒಂದು ಟ್ರೆಂಡ್.. ಇಷ್ಟು ಹೊತ್ತಿಗೆ ನಿಮಗೂ ಗೊತ್ತಾಗಿರಬಹುದು ಯಾರ ಬಗ್ಗೆ ನಾನು ಹೇಳಲು ಹೊರಟಿದ್ದೇನೆಂದು.. ಅದೇ.. ಡಾ|| ರಾಜ್ ಕುಮಾರ್ ಬಗ್ಗೆ...
ಕಲೆ: ಶ್ರೀಯುತ ಸು. ವಿ. ಮೂರ್ತಿ
ಸರಿಸುಮಾರು 50 ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟಸಾರ್ವಭೌಮ ಡಾ|| ರಾಜ್ ಕುಮಾರ್ ಬಗ್ಗೆ ತಿಳಿಯದವರು ಯಾರಾದರೂ ಇರುವರೇ?? ಅವರ ವಿಭಿನ್ನ ಅಭಿನಯದಿಂದ ಆಬಾಲವೃದ್ಧರಾದಿಯಾಗಿ ಎಲ್ಲರ ಮನಸೂರೆ ಮಾಡಿದ ಅಣ್ಣಾವ್ರನ್ನ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭೂಮಿಗೆ ಕರೆಸಲು ನಮ್ಮ ಗಾಂಪರ ಗುಂಪು ಆಲೋಚಿಸಿತು.. ಅಭಿಮಾನಿಗಳೇ ದೇವರು ಎಂದು ತಿಳಿದಿರುವ ಅಣ್ಣಾವ್ರು ಇಲ್ಲ ಅನ್ನುತ್ತಾರೆಯೇ? ಅವ್ರು ಬರೋದು ಗೊತ್ತಾಗುತ್ತಿದ್ದಂತೆ ನಮ್ಮ ಪತ್ರಕರ್ತರೆಲ್ಲ ಅವರ ಸಂದರ್ಶನ ಮಾಡಲು ದೌಡಾಯಿಸಿದರು.

ಕಾರ್ಯಕ್ರಮ ಸಂಘಟಕರು ಅಣ್ಣಾವ್ರ ಸನ್ಮಾನದ ದಿನ ಪತ್ರಕರ್ತರೊಡನೆ ಸಂದರ್ಶನಕ್ಕೆ ಸಮಯ ನಿಗದಿ ಪಡಿಸಿದರು.

ಸಮಯ: ಬೆಳಿಗ್ಗೆ 10:30.

ಅಣ್ಣಾವ್ರು ಬಿಳಿ ಪಂಚೆ, ಬಿಳಿ ಶರ್ಟು ಹಾಕಿ ತಮ್ಮ ಟ್ರೇಡ್-ಮಾರ್ಕ್ ಗೆಟಪ್ಪಿನಲ್ಲಿ ಪತ್ರಕರ್ತರ ಎದುರು ಕುಳಿತುಕೊಂಡರು.. ಶುರುವಾಯಿತು ಪ್ರಶ್ನೆಗಳ ಸುರಿಮಳೆ..

ಪ್ರಶ್ನೆ: ಅಣ್ಣಾವ್ರೆ, ನಿಮ್ಮನ್ನ ನೋಡಿ ಬಹಳ ಖುಷಿಯಾಯಿತು.. ಹೇಗಿದ್ದೀರ?.. ಹೇಗಿದೆ ಸ್ವರ್ಗ?
ಅಣ್ಣಾವ್ರು: ಆ ಆಹಾ.. ನಾನು ಚೆನ್ನಾಗಿದ್ದೀನ್ರಪ್ಪ.. ನೀವೆಲ್ಲ ಹೇಗಿದ್ದೀರ? ನೋಡಿ ಬಾಳ ಆನಂದವಾಯ್ತು... ಅಭಿಮಾನಿ ದೇವ್ರುಗಳು ಇಲ್ದೆ ಇರೋ ಸ್ವರ್ಗ ಸ್ವರ್ಗನೇನ್ರಪ್ಪ?.. ಇಲ್ಲ ಇಲ್ಲ, ಕಂಡಿತ ಇಲ್ಲ.. ಇಲ್ಲಿರೋ ವಾತವರಣ, ಅಭಿಮಾನಿ ದೇವರುಗಳ ಪ್ರೀತಿ, ಆ ವಿದ್ಯಾರ್ಥಿ ಭವನ್ ದೋಸೆ, ಎಂ ಟಿ ಆರ್ ತಿಂಡಿಗಳು, ಕನ್ನಡ ಚಿತ್ರರಂಗ, ಶುಕ್ರವಾರ ಬಂದ್ರೆ ಡಬ್ಬದಿಂದ ಬೆಳಕು ಕಾಣೋ ಡಬ್ಬಾ ಕನ್ನಡ ಚಿತ್ರಗಳು.. ಎಲ್ಲದನ್ನೂ ಮಿಸ್ ಮಾಡ್ಕೊತಾ ಇದೀನಿ ಕಣ್ರಯ್ಯ..

ಪ್ರಶ್ನೆ: ಹೇಗೆ ಅನ್ನಿಸ್ತಾ ಇದೆ ಬೆಂಗಳೂರು?
ಅಣ್ಣಾವ್ರು: ಟ್ರಾಫಿಕ್ ತುಂಬಾ ಜಾಸ್ತಿ ಆಗಿದೆ ಅನ್ಸುತ್ತೆ.. ಆದ್ರೂ ಪಾಪ ನಮ್ಮ ಸರ್ಕಾರದವರು ಮೆಟ್ರೋ ಅದು ಇದು ಅಂತ ಏನಾದ್ರೂ ಮಾಡ್ತಾನೇ ಇರ್ತಾರೆ ನೋಡಿ. ಒಟ್ನಲ್ಲಿ ಜನಗಳಿಗೆ ಒಳ್ಳೆದಾದ್ರೆ ಸಾಕು ನೋಡಿ.. ಮೆಟ್ರೋನಲ್ಲಿ ಹೋಗಿದ್ದೆ ಕಣ್ರಪ್ಪ.. ಬಾಳ ಚೆನ್ನಾಗ್ ಮಾಡಿದಾರೆ.. ನಮ್ ಜನ ಅದನ್ನ ಹೆಂಗೆ ನೋಡ್ಕೋತಾರೆ ಅಂತ ನೋಡ್ಬೇಕು..

ಪ್ರಶ್ನೆ: ಈಗಿನ ರಾಜಕೀಯ ಪರಿಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯ?
ಅಣ್ಣಾವ್ರು: ನಮಗೂ ರಾಜಕೀಯಕ್ಕೂ ಬಾಳ ದೂರ. ಅದ್ರೂ ಕೇಳಿ ಬಾಳ ಬೇಜಾರಾಯ್ತು.. ಜನಕ್ಕೆ ಸಾಧ್ಯವಾದಷ್ಟು ಒಳ್ಳೇದು ಮಾಡ್ಬೇಕು.. ಆಗಿಲ್ಲ ಅಂದ್ರೆ ಕೆಟ್ಟದ್ದನ್ನು ಮಾತ್ರ ಮಾಡ್ಲೇಬಾರ್ದು.. ಈಗ ನೋಡಿ.. ಎಲ್ಲ ಒಬ್ಬೂಬ್ಬರಾಗಿ ಜೈಲ್ ಸೇರ್ತಾ ಇದಾರೆ.. ಉಪ್ಪು ತಿಂದವರು ನೀರು ಕುಡಿಲೇಬೇಕು.. ತ್ರೇತಾಯುಗದಲ್ಲಿ ರಾಮ, ದ್ವಾಪರಯುಗದಲ್ಲಿ ಕೃಷ್ಣ ಇದ್ಹಂಗೆ, ಈ ಕಾಲದಲ್ಲಿ ನಮ್ಮ ಲೋಕಾಯುಕ್ತ ಹೆಗ್ಡೆಯವರು, ಅಣ್ಣಾ ಹಜಾರೆ ಅವ್ರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡ್ಸೋ ಕೆಲಸ ಮಾಡ್ತಾ ಇದಾರೆ.. ಕೇಳಿದ್ರೆ ಬಾಳ ಆನಂದ ಆಗುತ್ತೆ.. ಆ ಆಹಾ..

ಪ್ರಶ್ನೆ: ಈಗಿನ ಚಲನಚಿತ್ರಗಳ/ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯ..
ಅಣ್ಣಾವ್ರು: ನೋಡಿ.. ನಮ್ ಕಾಲದಲ್ಲಿ ಒಳ್ಳೊಳ್ಳೇ ಚಿತ್ರ ಬರೋವು.. ಕಾದಂಬರಿ ಆಧಾರಿತ ಚಿತ್ರ ಬರ್ದೇ ಎಷ್ಟು ಸಮಯ ಆಗಿದೆ ನೀವೇ ಲೆಕ್ಕಹಾಕಿ.. ರೀಮೇಕ್ ಮಾಡ್ತಾ ಕೂತಿದ್ರೆ ಚಿತ್ರರಂಗ ಹೇಗಪ್ಪ ಉದ್ದಾರ ಆಗುತ್ತೆ.?? ಸ್ವಮೇಕ್ ಕೂಡ ಮಾಡ್ರಪ್ಪ.. ಒಳ್ಳೆ ಕಾದಂಬರಿ ಆಧಾರಿತ ಚಿತ್ರ ಮಾಡಿ, ಒಳ್ಳೆ ಕಥೆ ಆಯ್ಕೆ ಮಾಡ್ಕೊಳಿ.. ಆಗ ನೋಡಿ ನಮ್ ಚಿತ್ರರಂಗ ಹೇಗೆ ಮುಂದುವರಿಯುತ್ತೆ ಅಂತ..

ಪ್ರಶ್ನೆ: ನಿಮ್ ಮಗ ಪುನೀತ್ 'ಹುಡುಗರು' ಅಂತ ರೀಮೇಕ್ ಚಿತ್ರ ಮಾಡಿದ್ದಾರಲ್ಲ..?
ಅಣ್ಣಾವ್ರು: ನೋಡಪ್ಪ ನಮ್ ಕಂಪನಿಯಿಂದ ಇದುವರೆಗೂ ರೀಮೇಕ್ ಮಾಡೇ ಇರ್ಲಿಲ್ಲ.. ಈಗ ಕಾಲ ಬದಲಾಗಿದೆ. ಜನಕ್ಕೆ ಏನಾದ್ರೂ ಒಳ್ಳೆ ಸಂದೇಶ ಕೊಡ್ಬೇಕು ಅನ್ನೋ ಪ್ರಯತ್ನ ಮಾಡಿದಾರೆ ಅಷ್ಟೇ.. ನಮ್ ಶಿವಣ್ಣನ್ನೇ ನೋಡಿ.. ರೀಮೇಕ್ ಮಾಡಲ್ಲ ಅಂತ ಹೇಳಿ ಶಪಥ ಮಾಡಿದಾನೆ.. ಅದನ್ನ ಪಾಲಿಸ್ತ ಇದಾನೆ ಕೂಡ. ಇನ್ನು ಪುನೀತ್ ಕೂಡ ಒಳ್ಳೊಳ್ಳೆ ಚಿತ್ರ ಮಾಡ್ತಾ ಇರ್ತಾನೆ.. ಅವ್ನ ಡಾನ್ಸು, ಹೊಡೆದಾಟ ಎಲ್ಲ ಚೆನ್ನಗಿರುತ್ತೆ.. ಮೊನ್ನೆ ಜಾಕಿ ಚಿತ್ರದಲ್ಲಿ ಸುಮಾರ್ ಜನನ್ನ ಮೇಲಕ್ಕೆ ಕಳ್ಸಿದ್ದ.. ನಮ್ಮ ಯಮರಾಜ್ರು ಅಪ್ಪು ಆಕ್ಷನ್ ಚಿತ್ರಗಳ ದೊಡ್ಡ ಫ್ಯಾನ್.. ಅವ್ರ ಕೆಲಸ ಸುಲಭ ಮಾಡ್ತಾನೆ ನೋಡಿ..

ಪ್ರಶ್ನೆ: ಈಗ ಬಿಡುಗಡೆ ಆಗ್ತಿರೋ ಚಿತ್ರಗಳ ಬಗ್ಗೆ ಒಂದೆರಡು ಮಾತು..
ಅಣ್ಣಾವ್ರು: ಸ್ವಲ್ಪ ಬೇಜಾರಗುತ್ತೆ ಕಣ್ರಪ್ಪ.. ನೀವೇ ನೋಡಿ.. ನಮ್ ದೂದ್ ಪೇಡ.. ಕನ್ನಡದ ಹುಡ್ಗ ದಿಗಂತ್ ಮಾಡಿರೋ ಚಿತ್ರಗಳು ಪ್ರತಿವಾರ ಒಂದೊಂದು ರಿಲೀಸ್ ಆಗ್ತಿದೆ. ಫಸ್ಟು ಲೈಫು ಇಷ್ಟೇನೆ, ಅದಾದ ಮೇಲೆ ಪುತ್ರ.. ನಂತರ ತಾರೆ.. ಈ ವಾರ ಕಾಂಚಾಣ... 4 ವಾರ 4 ಚಿತ್ರ ಒಂದೇ ಹೀರೋದು ರಿಲೀಸ್ ಆದ್ರೆ ಜನ ಎಷ್ಟು ಅಂತ ನೋಡ್ತಾರೆ? ಇದ್ರಿಂದ ಯಾರ್ಗೂ ಲಾಭ ಇಲ್ಲ..

ಪ್ರಶ್ನೆ: ನಿಮಗೆ ಈಗ ಅಭಿನಯ ಮಾಡಲು ಅವಕಾಶ ಸಿಕ್ರೆ ಯಾವ ನಿರ್ದೇಶಕರ ಜೊತೆ ಕೆಲಸ ಮಾಡಲು ಇಷ್ಟಪಡ್ತೀರ?
ಅಣ್ಣಾವ್ರು: ಎಲ್ಲರ ಹತ್ರನೂ ಕಲಿಯೋಕೆ ಒಂದೊಂದು ವಿಷ್ಯ ಇರುತ್ತೆ ಅನ್ನೋದು ನನ್ನ ಅನುಭವ.. ಆದ್ರೂ ಚಾನ್ಸ್ ಸಿಕ್ರೆ ಯೋಗರಾಜ್ ಭಟ್, ಉಪೇಂದ್ರ, ಸೂರಿ ಅವ್ರ ಚಿತ್ರಗಳಲ್ಲಿ ಅಭಿನಯಿಸೋ ಆಸೆ ಇದೆ..

ಪ್ರಶ್ನೆ: ನೀವು ಒಳ್ಳೆ ಗಾಯಕರು.. ಮತ್ತು ರಂಗಭೂಮಿಯಿಂದ ಬಂದಿರೋರು.. ಈಗಿನ ಚಿತ್ರಗಳಲ್ಲಿರೋ ಸಂಗೀತ-ಸಾಹಿತ್ಯದ ಬಗ್ಗೆ?
ಅಣ್ಣಾವ್ರು: ಹರಿಕೃಷ, ಅರ್ಜುನ, ವೀರ ಸಮರ್ಥ, ಶ್ರೀಧರ್ ಥರ ಒಳ್ಳೊಳ್ಳೆ ಸಂಗೀತ ನಿರ್ದೇಶಕರು ಬಂದಿದ್ದಾರೆ.. ನಮ್ ಯೋಗರಾಜ್ ಭಟ್ರು, ಜಯಂತ್ ಕಾಯ್ಕಿಣಿ, ಕವಿರಾಜ್ ಅವ್ರ ಸಾಹಿತ್ಯಗಳು ಅಮೋಘವಾಗಿದೆ.. ಸೋನು ನಿಗಮ್ ಹಾಡುಗಳಂತೂ ದೇವಲೋಕದಲ್ಲೂ ಫೇಮಸ್ಸು.. ಇಂದ್ರ ಯಾವಾಗ್ಲೂ ಹಾಕ್ತ ಇರ್ತಾನೆ.. ಯಮರಾಜರಿಗಂತೂ ಕೈಲಾಶ್ ಖೇರ್ ಹಾಡಿರೋ ಹಾಡ್ಗಳು ಸಿಕ್ಕಾಪಟ್ಟೆ ಇಷ್ಟ..

ಪ್ರಶ್ನೆ: ಹಾಗಾದ್ರೆ ಪಂಕಜ.. ಊರಿಗೊಬ್ಳೆ ಪದ್ಮಾವತಿ.. ಅಂತ ಹಾಡುಗಳು ಇರ್ಬೇಕು ಅಂತಿರ..?!
ಅಣ್ಣಾವ್ರು: (ನಗುತ್ತಾ) ಅದೇನೋ ನಾ ಕಾಣೆ ಶಿವ.. ನನ್ಗಿರೋದ್ ಒಬ್ಳೆ ಪಾರ್ವತಿ..

ಸರಿ, ನಾನು ಹೊರ್ಡ್ತಿನ್ರಪ್ಪ.. ಅಲ್ಲಿ ನಮ್ ಸಾಹಸಸಿಂಹ ಕಾಯ್ತಾ ಇರ್ತಾರೆ..

(ಅಣ್ಣಾವ್ರ ಹಾಗೂ ಅಣ್ಣಾವ್ರ ಸಮಸ್ತ ಅಭಿಮಾನಿ ದೇವರುಗಳ ಕ್ಷಮೆ ಕೋರಿ..)

2 comments:

Anonymous said...

Annavru mattomme abhinaya madoke swargadallae chance sikkre Puttanna Kanagal, G V Iyer athva Shankar Nag avara nirdeshanadalli baruva chitra galalli natisabeku, Upendra chitradallalla...

Matte Yograj Bhat avru haadu bareyuttene anno uddeshavanna itkondu kannada sahityavannu kole madtaa idare, avara haadugalu kelisikondre kivigalanna phenyl haaki toledukollabeku...

~ Jawahar

ಗುರುರಾಜ said...

ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಜವಾಹರ್..
ಪುಟ್ಟಣ್ಣ, ಜಿ.ವಿ. ಐಯ್ಯರ್ ಅವರ ಚಿತ್ರಗಳಲ್ಲಿ ಅಣ್ಣಾವ್ರು ಈಗಾಗಲೇ ಪಾತ್ರ ಮಾಡಿದ್ದಾರೆ. ಉಪೇಂದ್ರ ಒಳ್ಳೆಯ ನಟ ಆಗಿರದೆ ಇರಬಹುದು ಆದರೆ ಒಳ್ಳೆ ತಂತ್ರಜ್ಞ ಏನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲರ ಹತ್ತಿರವೂ ಕಲಿಯುವಂಥಹದ್ದು ಏನಾದರೂ ಇದೆ ಎನ್ನುವುದು ಅಣ್ಣಾವ್ರ ಅಭಿಪ್ರಾಯ.
ಇನ್ನು ಯೋಗರಾಜ್ ಭಟ್ ಬಗ್ಗೆ ನೀವು ಬರೆದಿರುವ ಸಾಲುಗಳು ಭಾಗಶಃ ಸರಿ.. ಅವರು ಎಷ್ಟರ ಮಟ್ಟಿಗೆ ತರ್ಲೆ ಸಾಹಿತ್ಯ ರಚಿಸಿದ್ದಾರೋ, ಅಷ್ಟೆ ಒಳ್ಳೆಯ ಸಾಹಿತ್ಯವನ್ನೂ ಒದಗಿಸಿದ್ದಾರೆ.. ಉದಾಹರಣೆಗೆ ಅವರು ರಚಿಸಿರುವ ಪ್ರೇಮಗೀತೆಗಳು.. ಇದು ನನ್ನ ಅಭಿಪ್ರಾಯವಷ್ಟೇ. ಅಭಿಪ್ರಾಯ ಹಾಗು ಅಭಿರುಚಿ ಜನರಿಂದ ಜನರಿಗೆ ಬದಲಾಗುತ್ತದಲ್ಲವೇ.. :0)