Wednesday, August 31, 2011

Father "Godfather" ಆದ ಕಥೆ.. !!!

ನನಗೆ ಮೇರಿ ಡೀನ ಆಶಾ ಎಂಬ ಕ್ರಿಶ್ಚಿಯನ್ ಸ್ನೇಹಿತೆ ಒಬ್ಬರಿದ್ದರು. ನಾವು  Heartland ಎಂಬ ಕಂಪನಿಯಲ್ಲಿ ಮುಂಚೆ ಒಟ್ಟಿಗೆ ಕೆಲಸ ಮಾಡಿದ್ದೆವು.. ಅವರಿಗಿದ್ದ ಕೆಲವೇ ಕೆಲವು ಸ್ನೇಹಿತರಲ್ಲಿ ನಾನು ಒಬ್ಬ. ಅವರಿಗೆ ಮದುವೆ ಆಗಿ ಕೆಲಸ ಬಿಟ್ಟು ಹೋಗಿದ್ದರು.. ಮದುವೆಗೆ ಕರೆದಿದ್ದರೂ ಸಹ, ಚೆನ್ನೈನಲ್ಲಿ ಇದ್ದಿದ್ದರಿಂದ ಹೋಗಲು ಆಗಿರಲಿಲ್ಲ. ನಾನು ಸಹ  Zentech ಎಂಬ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ನಮ್ಮಿಬ್ಬರ ನಡುವೆ ಅಷ್ಟೊಂದು communication ಇರಲ್ಲಿಲ್ಲ.

ಒಂದು ದಿನ Gmail ನಲ್ಲಿ ಆಶಾ ಮಗುವಿನ ನಾಮಕರಣದ Invitation ಬಂತು.. ಸ್ಥಳ ಬೆಂಗಳೂರಿನ townhall ಬಳಿ ಇರುವ church ನಲ್ಲಿ ಎಂದಿತ್ತು. ಭಾನುವಾರವು ಆಗಿದ್ದರಿಂದ ಸರಿ ಹೋಗೋಣ; ಹಳೆಯ heartland ಸ್ನೇಹಿತರು ಬರಬಹುದು ನೋಡಿದ ಹಾಗಾಗುತ್ತೆ ಎಂದು ಕಾರ್ಯಕ್ರಮಕ್ಕೆ ಹೋಗುವ ಮನಸು ಮಾಡಿದೆ.. ಆದರೆ ಆ ದಿನ ನನ್ನ ಜೀವನದಲ್ಲಿ ಮರೆಯಲಾರದ ದಿನವಾಗುತ್ತದೆಂದು ಎಂದೂ ಭಾವಿಸಿರಲಿಲ್ಲ. ಆಶಾ ಕೂಡ ಫೋನ್ ಮಾಡಿ ಮನೆಯವರೊಂದಿಗೆ ಬರಲೇ ಬೇಕೆಂದು ಒತ್ತಾಯ ಮಾಡಿ ಕರೆದರು.. ಜೊತೆಯಲ್ಲಿ Vegetarian ಊಟ ಎಂದು ಎರಡೆರಡು ಬಾರಿ ಹೇಳಿದರು. ಏಕೆಂದರೆ ಮುಂಚೆ ವೆಜ್  ನಾನ್ ವೆಜ್ ಬಗ್ಗೆ ನಮ್ಮಿಬ್ಬರ ಬಗ್ಗೆ ತುಂಬಾ ವಾಗ್ಯುದ್ಧಗಳಾಗಿದ್ದವು..
 
ಭಾನುವಾರ ಬಂತು. ಬೆಳಿಗ್ಗೆ ೧೧.೩೦ ಕ್ಕೆ ಸರಿಯಾಗಿ ಅಲ್ಲಿ ಹೋದೆ..  ಹಳೆಯ ಸ್ನೇಹಿತರು ಯಾರೂ ಬಂದಿರಲಿಲ್ಲ.. (ನಂತರ ತಿಳಿಯಿತು. Heartland ನಿಂದ ಕೇವಲ ಇಬ್ಬರ್ರನ್ನು ಮಾತ್ರ ಕರೆದಿದ್ದರೆಂದು). ಎಲ್ಲರಿಗೂ ಶುಭಾಶಯ ತಿಳಿಸಿ, ಗಿಫ್ಟ್ ಕೊಟ್ಟು ನನ್ನ ಜಾಗಕ್ಕೆ ಬಂದು ಕುಳಿತೆ. ಊಟ ೧.೩೦ ಕ್ಕೆ ಎಂದು ಆಮಂತ್ರಣ ಪತ್ರಿಕೆ ಯಲ್ಲಿ ಇದ್ದಿದ್ದರಿಂದ ಅದರ ಬಗ್ಗೆ ಯೋಚನೆ ಮಾಡಲಿಲ್ಲ. ಆದರೆ ಜೊತೆಗೆ ಮಾತನಾಡಲು ಯಾರು ಇಲ್ಲದಿದ್ದರಿಂದ ಹಸಿವು ಕಾಡತೊಡಗಿತು.. ಆಗ ಮೊಬೈಲ್ ಬೇರೆ ಅಷ್ಟೊಂದು ಬಳಕೆಯಲ್ಲಿ ಇರದಿದ್ದರಿಂದ, ಅದನ್ನು ಹಿಡಿದು ಕುಳಿತರೆ ಅಷ್ಟು ಚೆನ್ನಾಗಿ ಕಾಣುವುದಿಲ್ಲವೆಂದು ಸುಮ್ಮನೆ ಕುಳಿತೆ.. ಅಲ್ಲಿ ಯಾರೂ ಪರಿಚಯ ಬೇರೆ ಇರಲಿಲ್ಲ.. ಇಷ್ಟು ಬೇಗ ಬಂದಿದ್ದು ಯಾಕೆಂದು ನನ್ನನ್ನು ನಾನೇ ಬೈದು ಕೊಳ್ಳತೊಡಗಿದೆ. ಅಂತೂ ಇಂತೂ ೧ .೩೦ ಆಯಿತು.. ಬೇಗ ಬೇಗ ಊಟ ಮುಗಿಸಿ ಮನೆಗೆ ಹೋದರಾಯಿತು ಎಂದು ಭಾವಿಸಿ, ಯಾರಾದರು ಊಟಕ್ಕೆ ಹೋಗಿ ಅಂತ ಹೇಳುತ್ತಾರೇನೋ ಎಂದು ಕಾಯತೊಡಗಿದೆ..  

ಆಶಾ ಖುದ್ದಾಗಿ ಬಂದು ಊಟ ಮಾಡಿ ಹೋಗಿ ಎಂದು ಹೇಳುತ್ತಿದ್ದಂತೆ.. ಎದ್ದು ಊಟದ ವ್ಯವಸ್ಥೆ ಮಾಡಲಾಗಿದ್ದ ಸ್ಥಳಕ್ಕೆ ನಡೆದೆ. ಚರ್ಚ್ ನ ಹೊರಗಡೆ ಪೆಂಡಾಲ್ ಹಾಕಿ ಊಟಕ್ಕೆ ಕೂರುವ ವ್ಯವಸ್ಥೆ ಮಾಡಲಾಗಿತ್ತು.. ಒಂದು ಹತ್ತು ಜನ ಊಟಕ್ಕೆ ಕುಳಿತ ನಂತರ ನಾನು ಹೋಗಿ ಊಟಕ್ಕೆ ಕುಳಿತೆ.. ನಾನು ಕುಳಿತ saalinalli ಆ ಕಡೆ ಈ ಕಡೆ ಯಾರು ಇರಲಿಲ್ಲ. ಮೂಲತಃ ಸಸ್ಯಾಹಾರಿಯಾಗಿದ್ದ ನಾನು ಅಲ್ಲಿ ನಾನ್ ವೆಜ್ ಇರುತ್ತದೆ ಎಂದು ತಿಳಿದಿರಲ್ಲಿಲ್ಲ. ಊಟಕ್ಕೆ ಕುಳಿತ ಮೇಲೆ ನನಗೆ ಈ ಪ್ರಶ್ನೆ ಕಾಡತೊಡಗಿತು.. ಏನು ಮಾಡುವುದು ಎಂದು ತಿಳಿಯದೆ ಚಡಪಡಿಸುತ್ತಿದ್ದೆ. 

ಆಗ ಸರಿಯಾಗಿ ನನ್ನ ಎದುರಿನ ಟೇಬಲ್ನಲ್ಲಿ ಆ ಚರ್ಚ್ನ ಪಾದ್ರಿ (ಫಾದರ್) ಬಂದು ಕುಳಿತರು.. ಆಗ ನನ್ನ ಮನಸ್ಸಿಗೆ ಸ್ವಲ್ಪ ನೆಮ್ಮದಿ ಎನಿಸಿತು. ಫಾದರ್ ಹೇಗೂ ನಾನ್ ವೆಜ್ ತಿನ್ನಲ್ಲ ಅದ್ದರಿಂದ ನಾನು ಸರಿಯಾದ ಜಾಗದಲ್ಲಿ ಕುಳಿತ್ತಿದ್ದೇನೆಂದು ನನ್ನ ಬೆನ್ನು ನಾನೇ ತಟ್ಟಿಕೊಂಡೆ.


ಅವರು ಕುಳಿತಿರುವ ಸಾಲಿನಲ್ಲೇ ಹೋಗಿ ಕುಳಿತು ಕೊಳ್ಳಲೆ ಎಂದು ಯೋಚಿಸಿದೆ. ಆದರು ಕುಳಿತ್ತಿದ್ದ ಜಾಗ ಬಿಟ್ಟು ಬೇರೆ ಕಡೆ ಹೋಗುವುದು ಸರಿ ಬರುವುದಿಲ್ಲ ಎಂದು ತಿಳಿದು ಅಲ್ಲಿಯೇ ಇದ್ದೆ. ಸುಮಾರಾಗಿ ಶಾಮಿಯಾನ ತುಂಬುತ್ತಿದ್ದಂತೆ ಬಡಿಸಲು ಶುರುವಿಟ್ಟುಕೊಂಡರು. ಉಪ್ಪು, ಉಪ್ಪಿನಕಾಯಿ, ಸ್ವೀಟ್ ಎಲ್ಲ ಬಂತು.. ಇದೆಲ್ಲ ನೋಡುತ್ತಿದ್ದಂತೆ ನನ್ನ ಹಸಿವು ತಾರಕಕ್ಕೇರಿತು. ನಂತರ ಪಲಾವ್, ಗೋಬಿ ಮಂಚೂರಿಯನ್ನು ಬಡಿಸಿದರು. ಕೆಲವರು ತಿನ್ನಲು ಶುರು ಮಾಡಿದರು.. ಸರಿ ನಾನು ಫಾದರ್ ನನ್ನೇ ನೋಡುತಿದ್ದೆ. ಅವರು ತಿನ್ನಲು ಪ್ರಾರಂಭಿಸುತ್ತಿದ್ದಂತೆ ನಾನು ಸಹ ಊಟ ಮಾಡಲು ಅಣಿಯಾದೆ.

ಅಸ್ತು ಹೊತಿಗೆ ಸರಿಯಾಗಿ ಫಾದರ್ ಪಕ್ಕ ಕುಳಿತ ಒಬ್ಬರು ಬಡಿಸುವಾತನಿಗೆ ಹೇಳಿದರು; "ಫಾದರ್ ಗೆ ಬಿರಿಯಾನಿನಲ್ಲಿ ಚಿಕನ್ ಜಾಸ್ತಿ ಹಾಕಪ್ಪ" ಎಂದು.. ಹಾಗೆ ಹೇಳಿದಾಗಲೇ ನನಗೆ ಗೊತ್ತಾಗಿದ್ದು ಅದು ಪಲಾವ್, ಗೋಬಿ ಮಂಚೂರಿ ಅಲ್ಲ, ಚಿಕನ್ ಬಿರಿಯಾನಿ ಮತ್ತು ಚಿಕನ್ ಮನ್ಚುರಿಯನ್ ಎಂದು. ನಂಗೆ ವಿದ್ಯುತ್ ಶಾಕ್ ಹೊಡೆದಂತ ಅನುಭವ. ನನ್ನ ಮನಸಿನಲ್ಲಿ ನೂರಾರು ಪ್ರಶ್ನೆಗಳು.. "ಫಾದರ್ ನಾನ್ ವೆಜ್ ತಿಂತಾರ?" "ಅಹಿಂಸೆ ಬಗ್ಗೆ ಪ್ರತಿಪಾದಿಸುವ ದೇವರ ಸೇವಕರು ಇವರು.. ಇದನ್ನು ತಡೆಯುವ ಬದಲು ಅವರೇ ಇದರಲ್ಲಿ ಭಾಗಿಯಾಗುತ್ತಿದ್ದಾರ?" "ಇಲ್ಲಿಂದ ನಾನು ಹೊರ ಹೋಗುವುದಾದರೂ ಹೇಗೆ?".. "೨ ಕ್ಷಣ ತಡವಾಗಿದ್ದರೆ ತಿಂದು ಬಿಡುತ್ತಿದ್ದೆನಲ್ಲ" ಹೀಗೆ ನಾನಾ ಯೋಚನೆಗಳು.. ಫಾದರ್ ನ ನಂಬಿ ಇಲ್ಲಿ ಕುಳಿತು ತಪ್ಪು ಮಾಡಿದೆ ಎನ್ನಿಸಿತು.. ಫಾದರ್ ನನಗೆ ಗಾಡ್ ಫಾದರ್ ರೀತಿ ಕಾಣಿಸತೊಡಗಿದರು. 

ಇಲ್ಲಿಂದ ತಪ್ಪಿಸಿ ಕೊಂಡು ಹೋಗುವ ಬಗೆ ಹೇಗೆ ಎಂದು ಯೋಚಿಸತೊಡಗಿದೆ.. ಆಗ ಸಹಾಯಕ್ಕೆ ಬಂತು ಮೊಬೈಲ್. ಸುಮ್ಮನೆ ಕಾಲ್ ಬಂದವರಂತೆ ನಟಿಸುತ್ತ, ಯಾರ ಬಳಿಯೋ ಮಾತಾಡುತ್ತಿರುವಂತೆ ಶಾಮಿಯಾನದ ಹೊರಗೆ ಬಂದೆ. ಮೊಬೈಲ್ಗೆ ಮನಸಿನಲ್ಲೇ ಥ್ಯಾಂಕ್ಸ್ ಹೇಳುತ್ತಾ ಈ ಅನುಭವದಿಂದಲೇ ಹೊಟ್ಟೆ ತುಂಬಿಸಿಕೊಂಡು ಇಲ್ಲಿ ಊಟವೇ ಬೇಡ ಅಂದುಕೊಂಡು ಹೊರ ನಡೆಯುವಾಗ, ಅಲ್ಲೇ ಶಾಮಿಯಾನದ ಹಿಂಭಾಗದಲ್ಲಿದ್ದ ವೆಜ್ ಊಟದ ಸಾಲು ನನ್ನನ್ನು ಅಣಕಿಸುತ್ತಿತ್ತು.

Sunday, August 14, 2011

Sunday Bazaar !!!!

ಬಹು ಸಮಯದಿಂದ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಸಂಡೇ ಬಜಾರ್ ಕುರಿತಾದ ನನ್ನ ಕುತೂಹಲಕ್ಕೆ ತೆರೆ ಬಿದ್ದಿದ್ದು ನಾನು 8 ನೇ ತರಗತಿಯಲ್ಲಿದ್ದಾಗ.. 

ಬೆಂಗಳೂರಿನ ಪುರಾತನ ಬೀದಿಗಳಲ್ಲಿ ಒಂದಾದ ಬಿ ವಿ ಕೆ ಅಯ್ಯಂಗಾರ್ ರಸ್ತೆ ಯಲ್ಲಿ ಪ್ರತಿ ಭಾನುವಾರ ನಡೆಯುವ ಈ ಸಂಡೇ ಬಜಾರ್, ಚೋರ್ ಬಜಾರ್ ಎಂದೂ ಸಹ ಪ್ರಖ್ಯಾತ.. ಇಲ್ಲಿ ಸಿಗುವ ಬಹುತೇಕ ಸಾಮಾನುಗಳು ಕದ್ದ ಮಾಲುಗಳೇ. ಈ ರಸ್ತೆಯ ಒಂದು ತುದಿ ಅವೆನ್ಯೂ ರೋಡಿನೆಡೆಗೆ ಸಾಗಿದರೆ, ಇನ್ನೊಂದು ತುದಿ ಕೆ ಆರ್ ಮಾರ್ಕೆಟ್ ಗೆ ಸೇರುತ್ತದೆ. ಇಲ್ಲಿ ಏನಿದೆ ಏನಿಲ್ಲ ಎನ್ನುವ ಹಾಗಿಲ್ಲ. ಇಲ್ಲಿ ಎಲ್ಲವೂ ಸಿಗುತ್ತದೆ .. ಪ್ರಖ್ಯಾತ ಕಂಪನಿಯ ಎಲೆಕ್ಟ್ರೋನಿಕ್ ಉಪಕರಣದಿಂದ, ಬಟ್ಟೆ-ಬರೆ (?), ಪರ್ಫ್ಯೂಮ್, ಪಾತ್ರೆ-ಪಗಡಿ, ದಿನ ನಿತ್ಯ ಬಳಸುವ ಉಪಕರಣಗಳಿಂದ ಹಿಡಿದು ಆಫೀಸಿಗೆ ಬೇಕಾಗುವ ಸರಕು ಸಮಾನುಗಳವರೆಗೆ ಎಲ್ಲ ಸಿಗುತ್ತದೆ. ಅದೂ ಎಲ್ಲ ಕಡಿಮೆ ಬೆಲೆಗೆ.

ಇಲ್ಲಿ ಸಿಗುವ ಬಹುತೇಕ ಸಾಮಗ್ರಿಗಳು ಕದ್ದ ಮಾಲು. ಇಲ್ಲದೆ ಹೋದರೆ ಕಂಪನಿ ಉಪಕರಣಗಳು ಅಷ್ಟು ಕಡಿಮೆ ಬೆಲೆಯಲ್ಲಿ ಸಿಗುವ ಸಂಭವ ಕಡಿಮೆ. ಇದರಲ್ಲಿ ಪೊಲೀಸರೂ ಶಾಮೀಲಾಗಿರುತ್ತಾರೆ ಎಂಬ ಆಪಾದನೆ ಇದ್ದರೂ, ೨೦೦೮ ರಲ್ಲಿ ಸಂಡೇ ಬಜಾರ್ ಅನ್ನು ಖಾಯಂ ಆಗಿ ಸ್ಥಗಿತಗೊಳಿಸಲಾಗುವುದು ಎಂದು ಅಂದಿನ ಕಮಿಷನರ್ ಆಜ್ಞೆ ಹೊರಡಿಸಿದ್ದರು. ಆ ಸಮಯದಲ್ಲಿ ನಡೆದ ಒಂದೆರಡು ಅಪರಾಧ ಪ್ರಕರಣಗಳಲ್ಲಿ ಇಲ್ಲಿಂದ ಕೊಂಡ ಆಯುಧಗಳನ್ನು ಬಳಸಲಾಗಿತ್ತು ಎಂಬುದು ಅದರ ಹಿಂದಿದ್ದ ಆಲೋಚನೆ. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.

ಹೋದ ಭಾನುವಾರ ನನಗೆ ಈ ಸಂಡೇ ಬಜಾರ್ ಗೆ ಹೋಗುವ ಅವಕಾಶ ಸಿಕ್ಕಿತು.. ಸಾಕಷ್ಟು ಬದಲಾವಣೆಗಳಾಗಿದ್ದವು .. ಮುಂಚೆಗಿಂತ, ಅಂಗಡಿಗಳನ್ನು ಜೋಡಿಸಿಕೊಂಡಿರುವ ರೀತಿ ವ್ಯವಸ್ಥಿತವಾಗಿತ್ತು. ಆದರೆ, ಕಿಕ್ಕಿರಿದ ಸಂತೆ, ಅಲ್ಲಿ ಬಂದಿದ್ದ ಜನ, ಯಾವುದೂ ಬದಲಾಗಿರಲಿಲ್ಲ. ಅಲ್ಲಿ ಸಿಗುತಿದ್ದ ಸಾಮಾನುಗಳು ಸಹ ಅಪ್ಡೇಟ್ ಆಗಿದ್ದವು.. ಹೊಸ ಹೊಸ ಬಗೆಯ ಉಪಕರಣಗಳು ಕಾಣಸಿಗುತ್ತಿದ್ದವು, ಅದೂ ಸಹ ಕಡಿಮೆ ಬೆಲೆಯಲ್ಲಿ, ಆದರೆ ಆ ಉಪಕರಣಗಳ ಬಾಳಿಕೆ ಬಗ್ಗೆ ಮಾತ್ರ ಎಲ್ಲರಿಗೂ ಯಕ್ಷ ಪ್ರಶ್ನೆ ಕಾಡುತಿತ್ತು.. ಅಂಗಡಿಗಳಲ್ಲಿ ಸಿಗದ ಎಲ್ಲ ಉಪಕರಣಗಳ spare ಪಾರ್ಟ್ಸ್ ಸಹ ಇಲ್ಲಿ ಸಿಗುತ್ತದೆ ಅದೂ ಸಹ ನಂಬಲಾರದ ಬೆಲೆಯಲ್ಲಿ. ಎಲ್ಲ ತರಹದ ಹತಾರಗಳು ಇಲ್ಲಿ ಸಿಗುತ್ತದೆ.


ಇಲ್ಲಿನ ವ್ಯಾಪಾರ ವಹಿವಾಟುಗಳಲ್ಲಿ ಪೊಲೀಸರಿಗೂ ಮಾಮೂಲು ನೀಡಬೇಕಾಗುತ್ತದೆ ಎಂಬ ಇಲ್ಲಿನ ವ್ಯಾಪಾರಿಗಳ ಅಳಲನ್ನು ಮಿಡ್-ಡೇ ಪತ್ರಿಕೆ ವರದಿ ಮಾಡಿತ್ತು. ಅದರ ಪ್ರಕಾರ, ಒಂದು ವ್ಯಾಪಾರಿ ೨೦ ರಿಂದ ೨೦೦೦ ದ ವರೆಗೂ ಪೊಲೀಸರಿಗೆ ಲಂಚ ನೀಡುತ್ತಾರಂತೆ. ಅದು ಅವರು ಮಾರಾಟ ಮಾಡುವ ವಸ್ತು, ಜನ, ಜಾಗದ ಮೇಲೆ ನಿರ್ಧರಿತವಾಗುತ್ತದಂತೆ. ಇದರ ಪ್ರಕಾರ ಹೋದರೆ, ತಿಂಗಳಿಗೆ ಪೊಲೀಸರಿಗೆ ೨ ಲಕ್ಷದ ವರೆಗೆ ಈ "ಮಾಮೂಲು" ಸಂದಾಯವಾಗುತ್ತದಂತೆ.


ಇಷ್ಟು ದೊಡ್ಡ ಮೊತ್ತದ ವರೆಗೂ ಲಂಚ ಕೊಡುತ್ತಾರೆ ಎಂದರೆ ಇಲ್ಲಿ ನಡೆಯುವ ವಹಿವಾಟು ಎಷ್ಟಿರಬಹುದೆಂದು ನೀವೇ ಊಹಿಸಿ. ಮಾರ್ಕೆಟ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಸಂಡೇ ಬಜಾರ್ ವ್ಯಾಪಾರಿಗಳಿಗೆ ತೊಂದರೆಯಾಗಿದ್ದರು, ಅಲ್ಲಲ್ಲೇ ಜಾಗ ಹುಡುಕಿ, ಆ ಕೊಳಕು ರಸ್ತೆಗಳಲ್ಲೇ ವ್ಯಾಪಾರ ನಡೆಸುವ ಇಲ್ಲಿನ ವ್ಯಾಪಾರಿಗಳ ಧೈರ್ಯ ನಿಜಕ್ಕೂ ಪ್ರಶಂಸನೀಯ.

ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳಲ್ಲಿ ಕಾಲಿಡುವುದು ದುಸ್ಸಾಹಸವೇ ಸರಿ. ಎಲ್ಲೆಲ್ಲೂ ಕೊಚ್ಚೆ ಮೋರಿಗಳ ನೀರು ಹರಿದಾಡುತಿರುತ್ತವೆ ಮಾತು ದುರ್ನಾಥ ಮೂಗಿಗೆ ಬಡಿಯುತ್ತಿರುತ್ತದೆ. ಆದರು ವ್ಯಾಪಾರಿಗಳ, ಮಳಿಗೆಗಳ, ಸಂಖ್ಯೆ ಕಡಿಮೆ ಏನೂ ಇರುವುದಿಲ್ಲ.

ಇದೆಲ್ಲ ಓದಿದ ಮೇಲೆ, ಸಾಧ್ಯವಾದರೆ ನೀವು ಒಮ್ಮೆ ಸಂಡೇ ಬಜಾರ್ಗೆ ಭೇಟಿ ಕೊಡಿ. ಆ ಅನುಭವವೇ ಬೇರೆ. ಆದರೆ ಅಲ್ಲಿ ಹೋಗಬೇಕಿದ್ದರೆ, ನಿಮ್ಮ ಪರ್ಸು, ಚೈನು, ಉಂಗುರಗಳು ಮತ್ತು ನೀವು ಕೊಂಡಿರುವ ಸಾಮಾನುಗಳ ಬಗ್ಗೆ ಜಾಗ್ರತೆಯಿಂದಿರಿ. ಯಾಕೆಂದರೆ, ನಿಮಗೆ ಸೇರಿದ ವಸ್ತುಗಳನ್ನು ಕದ್ದು ನಿಮಗೆ ಮಾರುವ ಚಾಣಕ್ಷರು ಇಲ್ಲಿ ಬಹಳಷ್ಟು ಮಂದಿಯಿದ್ದಾರೆ.