Tuesday, January 4, 2011

ಪುಟ್ಟ ಪುಟ್ಟಿ ಸ್ಟೋರಿ

ಪುಟ್ಟಿ ತುಂಬಾ ಖುಷಿಯಾಗಿದ್ದಳು ಆ ದಿವಸ.. ಕಾರಣ.. ಪ್ರಥಮ ಬಾರಿಗೆ ಅವಳ ಇಂಟರ್ನೆಟ್ ಗೆಳೆಯ ಅವಳೂರಿಗೆ ಬರುವವನಿದ್ದ.. ಅವನನ್ನು ಕಾಣುವ ತವಕ ಒಂದೆಡೆ.. ಅವನಿಗೇನಾದರೂ ಕಾಣಿಕೆ ಕೊಡಬೇಕೆನ್ನುವ ತವಕ ಮತ್ತೊಂದೆಡೆ..
ಅವಳ ಬಳಿ ದುಡ್ಡಾದರೂ ಇದೆಯಾ.. ?? ಅದೂ ಇಲ್ಲ.. ಯಾರನ್ನು ಕೇಳಲಿ?? ಏನು ಮಾಡಲಿ.. ಅದೇ ಚಿಂತೆ.. ಜೊತೆಗೆ ಅಮ್ಮಮತ್ತು ತಂಗಿಯ ಕಾಟ ಬೇರೆ.. "ಯಾಕೆ ಡಲ್ ಆಗಿದಿಯ" ಅಂತ..

ಎಲ್ಲರೂ ಮಲಗಿದೊಡನೆ ತನ್ನ ಸೇವಿಂಗ್s ಹುಂಡಿಯನ್ನೊಮ್ಮೆ ತೆಗೆದು ನೋಡುತ್ತಾಳೆ, ಬರಿ ೨೩೮ ರೂಪಾಯಿಗಳು ಮಾತ್ರ ಇದೆ.. ಯಾರಿಗೂ ಹೇಳದೆ.. ಎಲ್ಲ ತೆಗೆದುಕೊಂಡು ಬೆಳಿಗ್ಗೆ ಆಫೀಸಿಗೆ ಹೊರಡುತ್ತಾಳೆ. ತನ್ನ ಬಾಸ್ ಗೆ ಕರೆ ಮಾಡಿ ಮನೆಯಲ್ಲಿ ನೆಂಟರು ಬಂದಿದ್ದಾರೆ, ಸ್ವಲ್ಪ ತಡ ಆಗುತ್ತದೆ ಎಂದು ಹೇಳಿ.. ವಾಚ್ ಶಾಪ್ ಗೆ ಲಗ್ಗೆ ಇಡುತ್ತಾಳೆ.

ಅಲ್ಲಿ ಎಲ್ಲ ವಾಚ್ ಗಳು ೩೦೦ ರೂಪಾಯಿಗಳ ಮೇಲೆ ಇತ್ತು.. ಬೇಜಾರಿನಿಂದ ವಾಪಸ್ ಆಫೀಸ್ ಗೆ ಬಂದು.. ತನ್ನ ಕೊಲೀಗ್ ಸುಂದರಿಗೆ ವಿಷಯ ಹೇಳಿ ಗಳಗಳ ನೆ ಒಂದೇ ಸಮ ಅಳತೊಡಗಿದಳು.. ವಿಷಯ ತಿಳಿದ ಸುಂದರಿ ಸಂಜೆ ಒಟ್ಟಿಗೆ ವಾಚ್ ಶಾಪ್ ಗೆ ಹೋಗೋಣ ಎಂದು ಸಂತೈಸಿ ಪುಟ್ಟಿ ಯನ್ನು ಸುಮ್ಮನಾಗಿಸುತ್ತಾಳೆ..
ಸಂಜೆ ವಾಚ್ ಶಾಪ್ ನಲ್ಲಿ ತನ್ನ ದೊಡ್ಡ ಗಂಟಲಿನಿಂದ ಫೇಮಸ್ ಆಗಿದ್ದ ಸುಂದರಿ.. ಅಂಗಡಿ ಯವನೊಂದಿಗೆ ಬಾರಿ ಚೌಕಾಶಿ ಮಾಡಿ ವಾಚನ್ನು ೨೫೦ ರೂಪಾಯಿಗೆ ಕೊಡಿಸುವಲ್ಲಿ ಯಶಸ್ವಿಯಾದಳು.. ಬಾಕಿ ಹಣವನ್ನು ಸಹ ಕೊಟ್ಟು ಉದಾರತೆ ಮೆರೆದಳು..
ಕುಶಿಯಲ್ಲಿ ಮುಳುಗಿದ್ದ ಪುಟ್ಟಿ ತಕ್ಷಣವೇ ಅದನ್ನು ಪ್ಯಾಕ್ ಮಾಡಿಸಿ ಮನೆಗೆ ಮರಳಿದಳು.. ಅವಳ ಸಂತಸ ಮನೆಯಲ್ಲಿ ಎಲ್ಲರಿಗೂ ಆಶ್ಚರ್ಯವುಂಟು ಮಾಡಿತ್ತು.. ಆದರೆ ಸಂತಸದ ಗುಟ್ಟು ಬಯಲು ಮಾಡುವ ಸ್ಥಿತಿಯಲ್ಲಿ ಪುಟ್ಟಿ ಇರಲಿಲ್ಲ..

ರಾತ್ರಿ ಎಲ್ಲರೂ ಮಲಗಿದ ನಂತರ... ತನ್ನ ಗೆಳೆಯನ ವಾಚನ್ನೊಮ್ಮೆ ನೋಡುವ ಮನಸಾಗಿ.. ಬಾಕ್ಸ್ನಿಂದ ಓಪನ್ ಮಡಿ ನೋಡುತ್ತಾಳೆ.. ಹೃದಯ ಬಾಯಿಗೆ ಬರುವುದೊಂದೇ ಬಾಕಿ.. ಗಡಿಯಾರ ನಿಂತು ಹೋಗಿದೆ.. !!!! ಬ್ಯಾಗ್ ನಲ್ಲಿದ್ದ ನೀರಿನ ಬಾಟಲಿ ಹೇಗೋ ತೆರೆದು ನೀರೆಲ್ಲ ಚೆಲ್ಲಿ ಗಡಿಯಾರ ಕ್ಕೆ ಸ್ನಾನ ಆಗಿದೆ..

ಮೊದಲೇ ಹೆದರುಪುಕ್ಕಲಿ.. ಹೇಗಪ್ಪ ಮತ್ತೆ ಅಂಗಡಿಯವನ ಬಳಿ ಹೋಗಲಿ ಎಂದು ಚಿಂತೆ.. ಮೊದಲೇ ಚೌಕಾಶಿ ಮಾಡಿರೋ ಬಗ್ಗೆ ಆತನಿಗೆ ಸಿಟ್ಟು ಬಂದಿರುತದೆ..ಈ ಸುಂದರಿ ಬೇರೆ ಜೋರಾಗಿ ಮಾತಾಡಿ ಜಗಳ ಮಾಡಿ ಬೆಲೆ ಕಮ್ಮಿ ಮಾಡಿಸಿದ್ದಾಳೆ.. ಇವಳ ಬಾಯಿ ಜೋರು... ಛೆ ಸಮಾಧಾನವಾಗಿ ಮಾತಾಡಿದ್ದರೆ ಇವಳ ಗಂಟು ಏನು ಮುಳುಗುತ್ತಿತು ಅಂತ ಬೈದು ಕೊಳ್ಳತೊಡಗಿದಳು.

ಬೆಳ್ಳಿಗ್ಗೆ ಆಫೀಸ್ ನಲ್ಲಿ ಕೆಲಸ ಜಾಸ್ತಿ ಎಂದು ಸುಳ್ಳು ಹೇಳಿ ಮನೆಯಿಂದ ಬೇಗ ಹೊರಟಳು.. ಸೀದಾ ವಾಚ್ ಅಂಗಡಿಗೆ ಹೋಗಿ ವಿಚಾರಿಸಿದಾಗ ತಿಳಿಯಿತು ಅದರ ಸೆಲ್ ಚೇಂಜ್ ಮಾಡಿದರೆ ಸರಿ ಹೋಗುತ್ತೆ ಅಂತ.. ಅದಕ್ಕೆ ಬರಿ ೩೦ ರುಪಾಯಿ ಎಂದು ವ್ಯಂಗ್ಯವಾಗಿ ನಕ್ಕ ಅಂಗಡಿಯವನ ಮುಖ ನೋಡಿ ಪುಟ್ಟಿ ನೊಂದುಕೊಂಡಳು.

ಏನು ಮಾಡುವುದೆಂದು ತೋಚುತಿಲ್ಲ.. ಆಫೀಸ್ನ ಸಮಯ ಬೇರೆ ಮೀರುತ್ತಿದೆ.. ಸಮಯ ನೋಡಿಕೊಂಡಳು.. ಇನ್ನು ಕೇವಲ ೫ ನಿಮಿಷ ಇದೆ. ಸಂಜೆ ಆಫೀಸಿಗೆ ಗೆಳೆಯನನ್ನು ಬರ ಹೇಳಿದ್ದಾಳೆ. ತಕ್ಷಣವೇ ಒಂದು ಯೋಚನೆ ಬಂತು.. ಅಪ್ಪ ಪ್ರೀತಿಯಿಂದ ಕೊಡಿಸಿದ್ದ ವಾಚನ್ನು ಬಿಚ್ಚಿ ಅಂಗಡಿಯವನ ಎದುರು ಹಿಡಿದಳು... ಇದರ ಸೆಲ್ ಆಗುತ ನೋಡಿ ಅಂತ.. ಪುಟ್ಟಿ ಯನ್ನೇ ದಿಟ್ಟಿಸಿ.. ಚೆಕ್ ಮಾಡಿ ನೋಡಿ "ಆಗುತ್ತೆ" ಅಂದ.. ತಕ್ಷಣವೇ ಅದನ್ನು ಹೊಸ ವಾಚ್ಗೆ ಹಾಕಲು ಹೇಳಿ ಮನಸಲ್ಲೇ ಆನಂದ ಪಟ್ಟಳು.. ಆ ವಾಚನ್ನು ಅವಳ ಅಪ್ಪ ಪ್ರೀತಿಯಿಂದ ಪಿ ಯು ಸಿ ಪಾಸ್ ಆದಾಗ ಕೊಡಿಸಿದ್ದರು. ಇವಳು ಅದನ್ನು ಬಹಳ ಜೋಪಾನ ಮಾಡಿ ನೋಡಿಕೊಂಡಿದ್ದಳು.. ಆದರೆ ತನ್ನ ಪ್ರೀತಿಯ ಗೆಳೆಯ ಪುಟ್ಟ ನಿಗೊಸ್ಕರ ಅ ವಾಚ್ ನ ಕಥೆ ಮುಗಿಸಿದ್ದಳು..

ಕುಶಿಯಿಂದ ಆಫೀಸ್ ಗೆ ಹೋದ ಪುಟ್ಟಿ ಗೆ ಮೇಲ್ ಬಂದಿತ್ತು.. ಪುಟ್ಟ ಬರುತಿಲ್ಲ.. ಬರುವುದೂ ಇಲ್ಲ.. !!!!
ಇಷ್ಟು ದಿನ ಅವಳು ಇಂಟರ್ ನೆಟ್ ನಲ್ಲಿ ಚಾಟ್ ಮಾಡುತ್ತ ಇದ್ದದ್ದು ಪುಟ್ಟ ನ ಜೊತೆ ಅಲ್ಲ.. ಅದು ಅವಳ ಹಳೆ ಕಾಲೇಜ್ ನ ಗೆಳತಿ (ವೈರಿ) ದಿವ್ಯ ನಡೆಸಿದ ಪ್ರಾಕ್ಟಿಕಲ್ ಜೋಕ್ ಎಂದು.. !!!!!!

Monday, January 3, 2011

ಪುಟ್ಟನ ಪ್ರಯಾಣ !!!

ತನ್ನ ಬಾಸ್ ನ ಎದುರು ನಿಂತಿದ್ದ ಪುಟ್ಟ ಸಣ್ಣಗೆ ನಡುಗುತಿದ್ದ.. ಮಾಡಿರುವ ಕೆಲಸದಲ್ಲಿ ಒಂದು ತಪ್ಪಾಗಿದೆ.. ತಪ್ಪು ಸಣ್ಣದಿದ್ದರೂ, ಬಾಸ್ ಕಣ್ಣಿಗೆ ಅದು ದೊಡ್ಡದಾಗಿ ಕಾಣುವ ಎಲ್ಲ ಸೂಚನೆಗಳು ಬಾಸ್ ನ ನಡವಳಿಕೆಯಲ್ಲಿ ಗೊತ್ತಾಗುತ್ತಿದೆ..

"ಯಾಕೆ ಹಿಂಗಾಯ್ತು?? ಹೇಳಿದ್ದನ್ನು ಮಾಡೋಕೆ ಏನ್ ಪ್ರಾಬ್ಲಮ್?? " ಬಾಸ್ ವಾಚಾಮಗೋಚರವಾಗಿ ಸಹಸ್ರ ನಾಮ ಶುರುಮಾಡುವ ಮುಂಚೆಯೇ.. ಪುಟ್ಟ ಕೇಳಿದ... "ಸರ್ ಒಂದು ವಿಷ್ಯ"
"ಏನು"? ತಲೆ ಮೇಲೆತ್ತದೆ ಕೇಳಿದ ಬಾಸ್ ಗೆ ಅಳುಕಿನಿಂದ ಪುಟ್ಟನ ಉತ್ತರ.. "ರಜೆ ಬೇಕಿತ್ತು.. "
"ಒಹ್ ಯಾಕ್ರಿ?? "
"ಸರ್ ಒಂದು ಮದ್ವೆ ಇತ್ತು.. ಅತ್ತೆ ಮಗಳ ಮದುವೆ ಊರಲ್ಲಿ.. ಹೋಗಬೇಕಿತ್ತು.. "
"ಯಾವಾಗ??" "ನಾಳೆ"
"ಈಗ ಹೇಳಿದ್ರೆ ಹೆಂಗ್ರಿ??? " "ಸರ್ ಎರಡೇ ದಿನ"
"ಓಕೆ ಹೋಗ್ಬನ್ನಿ.. ಸಂಜೆ ಒಳಗೆ ಅ ಫೈಲ್ ನ ಮುಗಿಸಿ ನಂಗೆ ಕಳ್ಸಿ ಹೋಗಿ"
"ಸರಿ ಸರ್"
ಖುಷಿಯಿಂದ ಪುಟ್ಟ ಹೊರಗೆ ಬಂದು ಮನೆಗೆ ಕಾಲ್ ಮಾಡಿದ.. "ಅಮ್ಮ... ಆಫೀಸ್ ಕೆಲಸದ ಮೇಲೆ ಚೆನ್ನೈಗೆ ಹೋಗಬೇಕು"ಬರೋದು ೨ ದಿನ ಆಗುತ್ತೆ".. ಅವನ ಧ್ವನಿ ಯಲ್ಲಿದ್ದ ನಡುಕ ಅವನಿಗೆ ಮಾತ್ರ ತಿಳಿಯುತ್ತಿತ್ತು..
ಸಂಜೆ ಖುಷಿಯಿಂದ ಮನೆಗೆ ಹೋಗಿ.. ರಾತ್ರಿಯೆಲ್ಲ ಸರಿಯಾಗಿ ನಿದ್ದೆ ಬರುತಿಲ್ಲ... ಏನೋ ಒಂದು ತಳಮಳ.. ತನ್ನ ಬಹು ದಿನದ ಕನಸು, ಆಸೆ ಪೂರೈಸಿಕೊಳ್ಳಲು ಕೇವಲ ೧ ದಿನ ಮಾತ್ರ ಇದೆ.. ತನ್ನ ೬ ತಿಂಗಳ ತಾಳ್ಮೆಗೆ ಕುತೂಹಲಕ್ಕೆ ತೆರೆ ಬೀಳಲಿದೆ..

ಮರು ದಿನ ಆಫೀಸಿನಿಂದ ಬೇಗ ಹೊರಟ ಪುಟ್ಟ.. ಮನೆಗೆ ಹೋಗಿ ಬ್ಯಾಗ್ ತೆಗೆದುಕೊಂಡು ಹೊರಟ..
ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ನೇತು ಹಾಕಿದ್ದ ದೊಡ್ಡ ಬೋರ್ಡ್ ಹುಡುಕತೊಡಗಿದ.. .. ತಾನು ಹುಡುಕುತ್ತಿದ್ದ ಬಸ್ ಪ್ಲಾಟ್ಫಾರ್ಮ್ ನಂ. ೫ ರಲ್ಲಿ ಇರುತ್ತೆ ಎಂದು ಬರೆದಿತ್ತು.. ಓಡಿ ಹೋಗಿ ನೋಡಿದ.. ಒಂದು ಬಸ್ ನಿಂತಿತ್ತು. ಸುಮಾರಾಗಿ ಜನ ತುಂಬಿದ್ದರು..
ಟಿಕೆಟ್ ತೆಗೆದುಕೊಂಡು ಹೋಗಿ ಒಳಗೆ ವಿಂಡೋ ಸೀಟ್ ಹುಡುಕಿ ಕುಳಿತುಕೊಂಡ.. ಲೈಟ್ ಆಫ ಅದೊಡನೆ.. ಯೋಚನಾ ಲಹರಿ ಹರಿಯತೊಡಗಿತು ಅವನ ಮನದಲ್ಲಿ..


ಬೆಳಿಗ್ಗೆ ೮ ಕ್ಕೆ ತಾನು ಇಳಿಯುವ ಸ್ಟಾಪ್ ಬಂತು.. ಬಸ್ ಸ್ಟ್ಯಾಂಡ್ ಪಕ್ಕದಲ್ಲೇ ಒಂದು ಸುಮಾರಗಿರುವ ಲಾಡ್ಜ್ ನಲ್ಲಿ ರೂಂ ಮಾಡಿದ.. ಸ್ನಾನ ತಿಂಡಿ ಮುಗಿಸಿ ಹೊರಗೆ ಹೋಗಿ ವಿಚಾರಿಸಿದ ಇಲ್ಲಿ ಲೈಬ್ರರಿ ಎಲ್ಲಿದೆ... ಎಷ್ಟು ದೂರ ಆಗುತ್ತೆ..? ಅದು ಲಾಡ್ಜ್ ನಿಂದ ೫ ನಿಮಿಷ ನಡೆದರೆ ಸಿಗುತ್ತೆ ಎಂದ ಮೇಲೆ ನಿರಾಳವಾಗಿ ಮತ್ತೆ ಲಾಡ್ಜ್ ಗೆ ಬಂದ.. ಅವನ ಕೆಲಸ ಇದ್ದದ್ದು ಸಂಜೆ ಮೇಲೆ.. ಮಂಚದ ಮೇಲೆ ಮಲಗಿ ಯೋಚಿಸತೊಡಗಿದ ಏನು ಮಾಡುವುದೆಂದು.... ಟಿವಿ ಬೇರೆ ಇರಲಿಲ್ಲ.. ಮೊಬೈಲಿನಲ್ಲಿ ಇಂಟರ್ನೆಟ್ ಕನೆಕ್ಟ್ ಬೇರೆ ಆಗ್ತಾ ಇರ್ಲಿಲ್ಲ. ಸುಮ್ನೆ ಗೋಡೆ ನೋಡುತ್ತಾ ಮಲಗಿದ್ದ.. ಗೋಡೆ ಮೇಲೆ ಒಂದು ಸುಂದರ ಕ್ಯಾಲೆಂಡರ್ ನೇತು ಹಾಕಲಾಗಿತ್ತು... ರವಿವರ್ಮನ ಪೇಂಟಿಂಗ್ ನೊಂದಿಗೆ.. ಆಗ ಒಂದು ಯೋಚನೆ ಬಂತು..

ಇಂಟರ್ನೆಟ್ ನಲ್ಲಿ ಚಾಟ್ ಮಾಡುವಾಗ ತಾನೀಗ ನೋಡಲು ಬಂದಿದ್ದ ಪ್ರೀತಿಯ ಗೆಳತಿ ಪುಟ್ಟಿ ಎಂದೋ ಹೇಳಿದ್ದಳು, ಅವಳ ಕಾಲೇಜ್ ನಲ್ಲಿ ದಿವ್ಯ ರೇಗಿಸಿ ಇವಳಿಗೆ ಕಾಟ ಕೊಟ್ಟಿದ್ದ ಕಥೆ.

ಇಷ್ಟು ದಿನ ಫೋಟೋ ಕಳಿಸದೆ, ಫೋನ್ ನಂಬರ್ ಕೊಡದೆ ಬರಿ ಚಾಟ್ ಮತ್ತು ಇಮೇಲ್ ನಲ್ಲೆ ಆಟ ಆಡಿಸುತ್ತಿದ್ದ ಪುಟ್ಟಿ ಗೆ, ಅವಳ ಜೊತೆ ಚಾಟ್ ಮಾಡಲೆಂದೇ ರಿಜಿಸ್ಟರ್ ಮಾಡಿದ್ದ ಇಮೇಲ್ ನಿಂದ ಪುಟ್ಟಿಗೆ ಮೇಲ್ ಮಾಡಿದ.. . "ನಾನು ಪುಟ್ಟ ಅಲ್ಲ.. ದಿವ್ಯ !!! ಇಷ್ಟು ದಿನ ಮಾಡಿದ್ದು ಪ್ರಾಕ್ಟಿಕಲ್ ಜೋಕ್ !! "

ಗೋಡೆ ಮೇಲೆ ನೇತು ಹಾಕಿದ್ದ ಕ್ಯಾಲೆಂಡರ್ ನಗುತ್ತಿತ್ತು.... ಏಪ್ರಿಲ್ ೧ ಎಂಬ ದಿನಾಂಕದೊಡನೆ..

Sunday, January 2, 2011

ಹಂಗೆ ಸುಮ್ನೆ

ಎಲ್ಲರಿಗೂ ನನ್ನ ನಮಸ್ಕಾರಗಳು...

ಹೇಗಿದ್ದೀರಿ? ಮೊದಲಿಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು...

ಈ ಬ್ಲಾಗ್ ಗೆ ಕಾರಣಕರ್ತರಾದ ಎಲ್ಲರಿಗೂ ನನ್ನ ನಮನಗಳು.
ಮೊದಲಿಗೆ ನನಗೆ ಎಲ್ಲ ರೀತಿಯಿಂದಲೂ ಸ್ಪೂರ್ತಿ ನೀಡಿದ ನನ್ನ ಪತ್ನಿ ಅನುಷ, ನನ್ನ ಬರವಣಿಗೆ ಬಗ್ಗೆ ಇಂಟರೆಸ್ಟ್ ತೋರಿಸಿ, ಈ ಬ್ಲಾಗ್ ಬರೆಯುವಂತೆ ಪ್ರೀತಿಯಿಂದ ಪೀಡಿಸಿದ ಡಾ| ಪ್ರಶಾಂತ್ ಗೆ, ಎಲ್ಲ ಸಮಯದಲ್ಲೂ ನನ್ನ ಜೊತೆಗೆ ಇರುವ ಸ್ನೇಹಿತರಾದ ಚೇತನ್ ಬಿ. ಎಸ್., ಪ್ರಮೋದ್, ವಿಜಯ್ ಗಡ್ವಾಲ್, ಸುಧೀರ್, ಚಂದನ್, ಅನುರಾಧ ಅವರಿಗೆ ನನ್ನ ವಂದನೆಗಳು..

ಎಲ್ಲ ಬ್ಲಾಗ್ ಗಳಂತೆ ಇದರಲ್ಲೂ ಸಹ ನನ್ನ ಚಿಂತನೆಗಳನ್ನು ಇದರಲ್ಲಿ ಹಂಚಿಕೊಳ್ಳಲಿದ್ದೇನೆ.. ನಿಮ್ಮ ಕಾಮೆಂಟ್ ಗಳಿಂದ ನನ್ನ ಪ್ರೋತ್ಸಾಹಿಸುವಿರಿ ಎಂದು ಭಾವಿಸಿದ್ದೇನೆ.. ಬ್ಲಾಗ್ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಇರುತ್ತೆ. ಅದು ಬರೆಯುವ ವಿಷಯದ ಮೇಲೆ ಅವಲಂಬಿಸಿದೆ.. :)

ಮುಂದಿನ ಬರವಣಿಗೆ ಅತಿ ಶೀಘ್ರದಲ್ಲಿ.. ನಿರೀಕ್ಷಿಸಿ.. :o)

ನಿಮ್ಮ ಪ್ರೀತಿಯ,
ಗುರು