Sunday, August 14, 2011

Sunday Bazaar !!!!

ಬಹು ಸಮಯದಿಂದ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಸಂಡೇ ಬಜಾರ್ ಕುರಿತಾದ ನನ್ನ ಕುತೂಹಲಕ್ಕೆ ತೆರೆ ಬಿದ್ದಿದ್ದು ನಾನು 8 ನೇ ತರಗತಿಯಲ್ಲಿದ್ದಾಗ.. 

ಬೆಂಗಳೂರಿನ ಪುರಾತನ ಬೀದಿಗಳಲ್ಲಿ ಒಂದಾದ ಬಿ ವಿ ಕೆ ಅಯ್ಯಂಗಾರ್ ರಸ್ತೆ ಯಲ್ಲಿ ಪ್ರತಿ ಭಾನುವಾರ ನಡೆಯುವ ಈ ಸಂಡೇ ಬಜಾರ್, ಚೋರ್ ಬಜಾರ್ ಎಂದೂ ಸಹ ಪ್ರಖ್ಯಾತ.. ಇಲ್ಲಿ ಸಿಗುವ ಬಹುತೇಕ ಸಾಮಾನುಗಳು ಕದ್ದ ಮಾಲುಗಳೇ. ಈ ರಸ್ತೆಯ ಒಂದು ತುದಿ ಅವೆನ್ಯೂ ರೋಡಿನೆಡೆಗೆ ಸಾಗಿದರೆ, ಇನ್ನೊಂದು ತುದಿ ಕೆ ಆರ್ ಮಾರ್ಕೆಟ್ ಗೆ ಸೇರುತ್ತದೆ. ಇಲ್ಲಿ ಏನಿದೆ ಏನಿಲ್ಲ ಎನ್ನುವ ಹಾಗಿಲ್ಲ. ಇಲ್ಲಿ ಎಲ್ಲವೂ ಸಿಗುತ್ತದೆ .. ಪ್ರಖ್ಯಾತ ಕಂಪನಿಯ ಎಲೆಕ್ಟ್ರೋನಿಕ್ ಉಪಕರಣದಿಂದ, ಬಟ್ಟೆ-ಬರೆ (?), ಪರ್ಫ್ಯೂಮ್, ಪಾತ್ರೆ-ಪಗಡಿ, ದಿನ ನಿತ್ಯ ಬಳಸುವ ಉಪಕರಣಗಳಿಂದ ಹಿಡಿದು ಆಫೀಸಿಗೆ ಬೇಕಾಗುವ ಸರಕು ಸಮಾನುಗಳವರೆಗೆ ಎಲ್ಲ ಸಿಗುತ್ತದೆ. ಅದೂ ಎಲ್ಲ ಕಡಿಮೆ ಬೆಲೆಗೆ.

ಇಲ್ಲಿ ಸಿಗುವ ಬಹುತೇಕ ಸಾಮಗ್ರಿಗಳು ಕದ್ದ ಮಾಲು. ಇಲ್ಲದೆ ಹೋದರೆ ಕಂಪನಿ ಉಪಕರಣಗಳು ಅಷ್ಟು ಕಡಿಮೆ ಬೆಲೆಯಲ್ಲಿ ಸಿಗುವ ಸಂಭವ ಕಡಿಮೆ. ಇದರಲ್ಲಿ ಪೊಲೀಸರೂ ಶಾಮೀಲಾಗಿರುತ್ತಾರೆ ಎಂಬ ಆಪಾದನೆ ಇದ್ದರೂ, ೨೦೦೮ ರಲ್ಲಿ ಸಂಡೇ ಬಜಾರ್ ಅನ್ನು ಖಾಯಂ ಆಗಿ ಸ್ಥಗಿತಗೊಳಿಸಲಾಗುವುದು ಎಂದು ಅಂದಿನ ಕಮಿಷನರ್ ಆಜ್ಞೆ ಹೊರಡಿಸಿದ್ದರು. ಆ ಸಮಯದಲ್ಲಿ ನಡೆದ ಒಂದೆರಡು ಅಪರಾಧ ಪ್ರಕರಣಗಳಲ್ಲಿ ಇಲ್ಲಿಂದ ಕೊಂಡ ಆಯುಧಗಳನ್ನು ಬಳಸಲಾಗಿತ್ತು ಎಂಬುದು ಅದರ ಹಿಂದಿದ್ದ ಆಲೋಚನೆ. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.

ಹೋದ ಭಾನುವಾರ ನನಗೆ ಈ ಸಂಡೇ ಬಜಾರ್ ಗೆ ಹೋಗುವ ಅವಕಾಶ ಸಿಕ್ಕಿತು.. ಸಾಕಷ್ಟು ಬದಲಾವಣೆಗಳಾಗಿದ್ದವು .. ಮುಂಚೆಗಿಂತ, ಅಂಗಡಿಗಳನ್ನು ಜೋಡಿಸಿಕೊಂಡಿರುವ ರೀತಿ ವ್ಯವಸ್ಥಿತವಾಗಿತ್ತು. ಆದರೆ, ಕಿಕ್ಕಿರಿದ ಸಂತೆ, ಅಲ್ಲಿ ಬಂದಿದ್ದ ಜನ, ಯಾವುದೂ ಬದಲಾಗಿರಲಿಲ್ಲ. ಅಲ್ಲಿ ಸಿಗುತಿದ್ದ ಸಾಮಾನುಗಳು ಸಹ ಅಪ್ಡೇಟ್ ಆಗಿದ್ದವು.. ಹೊಸ ಹೊಸ ಬಗೆಯ ಉಪಕರಣಗಳು ಕಾಣಸಿಗುತ್ತಿದ್ದವು, ಅದೂ ಸಹ ಕಡಿಮೆ ಬೆಲೆಯಲ್ಲಿ, ಆದರೆ ಆ ಉಪಕರಣಗಳ ಬಾಳಿಕೆ ಬಗ್ಗೆ ಮಾತ್ರ ಎಲ್ಲರಿಗೂ ಯಕ್ಷ ಪ್ರಶ್ನೆ ಕಾಡುತಿತ್ತು.. ಅಂಗಡಿಗಳಲ್ಲಿ ಸಿಗದ ಎಲ್ಲ ಉಪಕರಣಗಳ spare ಪಾರ್ಟ್ಸ್ ಸಹ ಇಲ್ಲಿ ಸಿಗುತ್ತದೆ ಅದೂ ಸಹ ನಂಬಲಾರದ ಬೆಲೆಯಲ್ಲಿ. ಎಲ್ಲ ತರಹದ ಹತಾರಗಳು ಇಲ್ಲಿ ಸಿಗುತ್ತದೆ.


ಇಲ್ಲಿನ ವ್ಯಾಪಾರ ವಹಿವಾಟುಗಳಲ್ಲಿ ಪೊಲೀಸರಿಗೂ ಮಾಮೂಲು ನೀಡಬೇಕಾಗುತ್ತದೆ ಎಂಬ ಇಲ್ಲಿನ ವ್ಯಾಪಾರಿಗಳ ಅಳಲನ್ನು ಮಿಡ್-ಡೇ ಪತ್ರಿಕೆ ವರದಿ ಮಾಡಿತ್ತು. ಅದರ ಪ್ರಕಾರ, ಒಂದು ವ್ಯಾಪಾರಿ ೨೦ ರಿಂದ ೨೦೦೦ ದ ವರೆಗೂ ಪೊಲೀಸರಿಗೆ ಲಂಚ ನೀಡುತ್ತಾರಂತೆ. ಅದು ಅವರು ಮಾರಾಟ ಮಾಡುವ ವಸ್ತು, ಜನ, ಜಾಗದ ಮೇಲೆ ನಿರ್ಧರಿತವಾಗುತ್ತದಂತೆ. ಇದರ ಪ್ರಕಾರ ಹೋದರೆ, ತಿಂಗಳಿಗೆ ಪೊಲೀಸರಿಗೆ ೨ ಲಕ್ಷದ ವರೆಗೆ ಈ "ಮಾಮೂಲು" ಸಂದಾಯವಾಗುತ್ತದಂತೆ.


ಇಷ್ಟು ದೊಡ್ಡ ಮೊತ್ತದ ವರೆಗೂ ಲಂಚ ಕೊಡುತ್ತಾರೆ ಎಂದರೆ ಇಲ್ಲಿ ನಡೆಯುವ ವಹಿವಾಟು ಎಷ್ಟಿರಬಹುದೆಂದು ನೀವೇ ಊಹಿಸಿ. ಮಾರ್ಕೆಟ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಸಂಡೇ ಬಜಾರ್ ವ್ಯಾಪಾರಿಗಳಿಗೆ ತೊಂದರೆಯಾಗಿದ್ದರು, ಅಲ್ಲಲ್ಲೇ ಜಾಗ ಹುಡುಕಿ, ಆ ಕೊಳಕು ರಸ್ತೆಗಳಲ್ಲೇ ವ್ಯಾಪಾರ ನಡೆಸುವ ಇಲ್ಲಿನ ವ್ಯಾಪಾರಿಗಳ ಧೈರ್ಯ ನಿಜಕ್ಕೂ ಪ್ರಶಂಸನೀಯ.

ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳಲ್ಲಿ ಕಾಲಿಡುವುದು ದುಸ್ಸಾಹಸವೇ ಸರಿ. ಎಲ್ಲೆಲ್ಲೂ ಕೊಚ್ಚೆ ಮೋರಿಗಳ ನೀರು ಹರಿದಾಡುತಿರುತ್ತವೆ ಮಾತು ದುರ್ನಾಥ ಮೂಗಿಗೆ ಬಡಿಯುತ್ತಿರುತ್ತದೆ. ಆದರು ವ್ಯಾಪಾರಿಗಳ, ಮಳಿಗೆಗಳ, ಸಂಖ್ಯೆ ಕಡಿಮೆ ಏನೂ ಇರುವುದಿಲ್ಲ.

ಇದೆಲ್ಲ ಓದಿದ ಮೇಲೆ, ಸಾಧ್ಯವಾದರೆ ನೀವು ಒಮ್ಮೆ ಸಂಡೇ ಬಜಾರ್ಗೆ ಭೇಟಿ ಕೊಡಿ. ಆ ಅನುಭವವೇ ಬೇರೆ. ಆದರೆ ಅಲ್ಲಿ ಹೋಗಬೇಕಿದ್ದರೆ, ನಿಮ್ಮ ಪರ್ಸು, ಚೈನು, ಉಂಗುರಗಳು ಮತ್ತು ನೀವು ಕೊಂಡಿರುವ ಸಾಮಾನುಗಳ ಬಗ್ಗೆ ಜಾಗ್ರತೆಯಿಂದಿರಿ. ಯಾಕೆಂದರೆ, ನಿಮಗೆ ಸೇರಿದ ವಸ್ತುಗಳನ್ನು ಕದ್ದು ನಿಮಗೆ ಮಾರುವ ಚಾಣಕ್ಷರು ಇಲ್ಲಿ ಬಹಳಷ್ಟು ಮಂದಿಯಿದ್ದಾರೆ.

2 comments:

Prashanth said...

ರಾಜು, ಇದುವರೆಗೂ ನಿಮ್ಮ Blogನಲ್ಲಿ ನಾನು ಓದಿರುವ ಅತ್ಯಂತ ಚೆಂದದ ಬರವಣಿಗೆ ಇದೇ ಇರಬೇಕು!
ಕನ್ನಡ ಭಾಷೆಯ ಉತ್ತಮ ಬಳಕೆ ಹಾಗೂ ನಿರೂಪಣಾ ಶೈಲಿ ಮೆಚ್ಚುಗೆಯಾಯಿತು. ನೀವೇ ಸೆರೆಹಿಡಿದ(?) ಛಾಯಾಚಿತ್ರಗಳು ಅತ್ಯುತ್ತಮವಾಗಿವೆ. ಹೀಗೆಯೇ ಬರೆಯುತ್ತಿರಿ :o)

ಗುರುರಾಜ said...

Thank you Prashanth for your valuable comments. I will try to outdo myself next time. :-)

Btw, images are STOLEN from google images. Forgot to mention that at the end of the post.